ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮಂಗಳವಾರ (ಮಾ.4) ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆಸೀಸ್ ಪಡೆಗೆ ಯುವ ಆಟಗಾರನೊಬ್ಬನ ಎಂಟ್ರಿಯಾಗಿದೆ.
ಹೌದು, 21 ವರ್ಷದ ಯುವ ಆಲ್ರೌಂಡರ್ ಕೂಪರ್ ಕೊನೊಲಿಯನ್ನು ಆಸ್ಟ್ರೇಲಿಯಾ ದುಬೈಗೆ ಕರೆಸಿಕೊಂಡಿದೆ. ಕೂಪರ್ ಹಿಂದೆ ಆಸ್ಟ್ರೇಲಿಯಾ ಪರ 6 ಪಂದ್ಯಗಳನ್ನಾಡಿದ್ದಾರೆ. ಇದೀಗ ಸೆಮಿಫೈನಲ್ಗೂ ಮುನ್ನ ಯುವ ಆಟಗಾರನನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಅಂದರೆ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಸೆಮಿಫೈನಲ್ನಿಂದ ಹೊರಬಿದ್ದಿದ್ದಾರೆ. ಲಾಹೋರ್ನಲ್ಲಿ ಶುಕ್ರವಾರ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶಾರ್ಟ್ ಗಾಯಗೊಂಡಿದ್ದರು. ಈ ಗಾಯದ ಕಾರಣ ಅವರು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಇದೀಗ ಅವರ ಬದಲಿಗೆ ಕೂಪರ್ ಕೊನೊಲಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಕೊನೊಲಿ ದುಬೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇನ್ನು ಮಾರ್ಚ್ 4 ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ನಲ್ಲಿ ಕೂಪರ್ ಕೊನೊಲಿ ಕಣಕ್ಕಿಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಜೇಕ್ ಫ್ರೇಸರ್ ಮೆಕ್‌ಗುರ್ಕ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಆ್ಯಡಂ ಝಂಪಾ, ಶಾನ್ ಅಬಾಟ್, ಅಲೆಕ್ಸ್ ಕ್ಯಾರಿ , ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕೂಪರ್ ಕೊನೊಲಿ.