
ಐಸಿಸಿ ಏಕದಿನ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿರುವುದು ನ್ಯೂಝಿಲೆಂಡ್ ಬ್ಯಾಟರ್ ಡೇರಿಲ್ ಮಿಚೆಲ್ (Daryl Mitchell). ಇದರೊಂದಿಗೆ ಕಿವೀಸ್ ಬ್ಯಾಟರ್ಗಳ ನಾಲ್ಕು ದಶಕಗಳ ಕನಸೊಂದು ಈಡೇರಿದಂತಾಗಿದೆ.

ಅಂದರೆ ಕಳೆದ 46 ವರ್ಷಗಳಲ್ಲಿ ನ್ಯೂಝಿಲೆಂಡ್ನ ಯಾವುದೇ ಬ್ಯಾಟರ್ ಏಕದಿನ ಬ್ಯಾಟ್ಸ್ಮನ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿರಲಿಲ್ಲ. 1979 ರಲ್ಲಿ ಗ್ಲೆನ್ ಟರ್ನರ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಇದಾದ ಬಳಿಕ ನಾಥನ್ ಆಸ್ಟ್ಲೆ, ರಾಸ್ ಟೇಲರ್ ಹಾಗೂ ಕೇನ್ ವಿಲಿಯಮ್ಸನ್ ಟಾಪ್-3 ನಲ್ಲಿ ಕಾಣಿಸಿಕೊಂಡರೂ ಮೊದಲ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ.

ಇದೀಗ ಬರೋಬ್ಬರಿ 46 ವರ್ಷಗಳ ಬಳಿಕ ನ್ಯೂಝಿಲೆಂಡ್ ದಾಂಡಿಗ ಡೇರಿಲ್ ಮಿಚೆಲ್ ಏಕದಿನ ಬ್ಯಾಟರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡ ನ್ಯೂಝಿಲೆಂಡ್ನ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಇನ್ನು ಏಕದಿನ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಗ್ರಸ್ಥಾನಕ್ಕೇರಿದ್ದ ಹಿಟ್ಮ್ಯಾನ್ ಈ ಬಾರಿ ಒಂದು ಸ್ಥಾನ ಕುಸಿತ ಕಂಡಿದ್ದು, ಒಟ್ಟು 781 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಯುವ ದಾಂಡಿಗ ಇಬ್ರಾಹಿಂ ಝದ್ರಾನ್ ಕಾಣಿಸಿಕೊಂಡಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಝದ್ರಾನ್ ಒಟ್ಟು 764 ಅಂಕಗಳೊಂದಿಗೆ ಐಸಿಸಿಯ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಭಾರತ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಇದ್ದಾರೆ. ಚಾಂಪಿಯನ್ ಟ್ರೋಫಿ ಟೂರ್ನಿಯ ಬೆನ್ನಲ್ಲೇ ಅಗ್ರಸ್ಥಾನಕ್ಕೇರಿದ್ದ ಗಿಲ್ ಆಸ್ಟ್ರೇಲಿಯಾ ಸರಣಿಯಲ್ಲಿ ವಿಫಲರಾಗಿದ್ದರು. ಅದರ ಪರಿಣಾಮ ಇದೀಗ 745 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಐದನೇ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿರುವುದು ವಿರಾಟ್ ಕೊಹ್ಲಿ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಕೊಹ್ಲಿ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 725 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.