
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ ಅವರ ಶತಕದ ಬರ ಕೊನೆಗೂ ನೀಗಿದೆ. ಕಳೆದ 12 ವರ್ಷಗಳಿಂದ ಟೀಂ ಇಂಡಿಯಾ ಪರ ಆಡುತ್ತಿರುವ ದೀಪ್ತಿ, ತಮ್ಮ ವೃತ್ತಿಜೀವನದಲ್ಲಿ ಹಲವು ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಭಾರತದ ಮೊದಲ ಮಹಿಳಾ ವಿಶ್ವಕಪ್ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇಷ್ಟೊಂದು ವರ್ಷಗಳ ಕ್ರಿಕೆಟ್ ಪಯಣದಲ್ಲಿ ಅವರ ಹೆಸರಿನಲ್ಲಿ ಇದ್ದದ್ದು ಒಂದೇ ಒಂದು ಶತಕ(PC-BCCI Women x).
ಇದೀಗ ಬರೋಬ್ಬರಿ 9 ವರ್ಷಗಳ ಬಳಿಕ ದೀಪ್ತಿ ತಮ್ಮ ಎರಡನೇ ಏಕದಿನ ಶತಕ ಸಿಡಿಸಿ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು 106 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ವಡೋದರಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದೀಪ್ತಿ ತಮ್ಮ ಶತಕದ ಬರ ನೀಗಿಸಿಕೊಂಡರು(PC-BCCI Women x).
ದೀಪ್ತಿ ಶರ್ಮಾ ಕೇವಲ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಹರ್ಮನ್ಪ್ರೀತ್ ಕೌರ್ ಜೊತೆಗೂಡಿ 153 ರನ್ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ದೀಪ್ತಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು(PC-BCCI Women x).
ಕೇವಲ 83 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರ ದಾಖಲಾದ ಐದನೇ ವೇಗದ ಶತಕವಾಗಿದೆ. ನಂತರವೂ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿದ ದೀಪ್ತಿ, ಒಟ್ಟು 86 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ ಅಜೇಯ 106 ರನ್ ಗಳಿಸಿದರು. ಈ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಎರಡನೇ ಶತಕವನ್ನು ದಾಖಲಿಸಿದರು(PC-BCCI Women x).
ದೀಪ್ತಿ ಶರ್ಮಾ ಅವರ ಎರಡನೇ ಶತಕವು ಮೊದಲ ಶತಕದ ಸುಮಾರು 9 ವರ್ಷಗಳ ಬಳಿಕ ಬಂದಿದೆ. ಅವರ ಹಿಂದಿನ ಏಕದಿನ ಶತಕ 2017ರ ಮೇ 15ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಾಖಲಾಗಿತ್ತು. ಆ ಪಂದ್ಯದಲ್ಲಿ ದೀಪ್ತಿ 188 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದ್ದರು(PC-BCCI Women x).
ಈ ಶತಕದ ಮೂಲಕ ದೀಪ್ತಿ ಶರ್ಮಾ ಮತ್ತೊಂದು ವಿಶೇಷ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಆರನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ(PC-BCCI Women x).
ಇದಕ್ಕೂ ಮೊದಲು ಈ ಕ್ರಮಾಂಕದಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ್ದ ರಿಚಾ ಘೋಷ್ ಅವರ 94 ರನ್ಗಳೇ ಅತ್ಯುತ್ತಮ ಸಾಧನೆಯಾಗಿತ್ತು. 2025ರ ಮಹಿಳಾ ವಿಶ್ವಕಪ್ನಲ್ಲಿ ರಿಚಾ ಈ ಇನ್ನಿಂಗ್ಸ್ ಆಡಿದ್ದರು. ಇದೀಗ 106 ರನ್ ಗಳಿಸಿದ ದೀಪ್ತಿ ಆ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ(PC-BCCI Women x).