6 ಪಂದ್ಯಗಳು, 506 ರನ್... ಬ್ಯಾಟಿಂಗ್ ಸರಾಸರಿ 84ಕ್ಕೂ ಹೆಚ್ಚು...2 ಶತಕಗಳು ಮತ್ತು 3 ಅರ್ಧ ಶತಕಗಳು... ಇದು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ಬ್ಯಾಟಿಂಗ್ ಅಂಕಿಅಂಶಗಳು. ಬೇಬಿ ಎಬಿ ಎಂದೇ ಖ್ಯಾತರಾಗಿದ್ದ ಡೆವಾಲ್ಡ್ ಬ್ರೆವಿಸ್ ಅವರ ಬ್ಯಾಟಿಂಗ್ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಈ ಭರ್ಜರಿ ಅಬ್ಬರದ ಪರಿಣಾಮ ಬ್ರೆವಿಸ್ ಹೆಸರು ಐಪಿಎಲ್ ಮೆಗಾ ಹರಾಜಿನಲ್ಲೂ ಎಲ್ಲಾ ಫ್ರಾಂಚೈಸಿಗಳ ಗಮನ ಸೆಳೆದಿತ್ತು.
ನಿರೀಕ್ಷೆಯಂತೆ 18 ವರ್ಷದ ಯುವ ಆಟಗಾರನ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ಕೂಡ ನಡೆಸಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು ಬರೋಬ್ಬರಿ 3 ಕೋಟಿ ರೂ. ನೀಡಿ ಡೆವಾಲ್ಡ್ ಬ್ರೆವಿಸ್ ಅವರನ್ನು ಖರೀದಿಸಿತ್ತು. ಆದರೀಗ ಬ್ರೆವಿಸ್ ಮಂಕಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನ ಬಳಿಕ ಆಡಿದ 5 ಇನಿಂಗ್ಸ್ನಲ್ಲೂ ವಿಫಲರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ದೇಶೀಯ ಟಿ20 ಟೂರ್ನಮೆಂಟ್ CSA T20 ಚಾಲೆಂಜ್ನಲ್ಲಿ ಡೆವಾಲ್ಡ್ ಬ್ರೆವಿಸ್ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ. ಮಂಗಳವಾರ ನಡೆದ ನಾರ್ತ್-ವೆಸ್ಟ್ ವಿರುದ್ಧದ ಪಂದ್ಯದಲ್ಲಿ ಬ್ರೆವಿಸ್ ಖಾತೆ ತೆರೆಯಲೂ ಕೂಡ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಡ್ವೇನ್ ಪ್ರಿಟೋರಿಯಸ್ ಅವರ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ಹೊರನಡೆದಿದ್ದರು.
ಈ ಟೂರ್ನಿಯಲ್ಲಿ ಐದು ಇನಿಂಗ್ಸ್ ಆಡಿರುವ ಬ್ರೆವಿಸ್ 25.50ರ ಸರಾಸರಿಯಲ್ಲಿ ಕೇವಲ 102 ರನ್ ಗಳಿಸಿದ್ದಾರೆ. ಇನ್ನು ಬ್ರೆವಿಸ್ ಬ್ಯಾಟ್‌ನಿಂದ ಒಂದೇ ಒಂದು ಅರ್ಧಶತಕ ಕೂಡ ಬಂದಿಲ್ಲ. ಅಷ್ಟೇ ಅಲ್ಲದೆ ಬಿರುಸಿನ ಬ್ಯಾಟಿಂಗ್ ಕೂಡ ಕಂಡು ಬಂದಿಲ್ಲ. ಇತ್ತ ಅಂಡರ್ 19 ವಿಶ್ವಕಪ್ ಬೆನ್ನಲ್ಲೇ ಎಬಿಡಿಯ ಉತ್ತರಾಧಿಕಾರಿಯಾಗಿ ಬಿಂಬಿತವಾಗಿದ್ದ ಬ್ರೆವಿಸ್ ಏಕಾಏಕಿ ಮಂಕಾಗಿರುವುದು ಇದೀಗ ಮುಂಬೈ ಇಂಡಿಯನ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಮುಂಬೈ ಇಂಡಿಯನ್ಸ್ ತಂಡವು ಡೆವಾಲ್ಡ್ ಬ್ರೆವಿಸ್ ಅವರನ್ನು ಯುವ ಫಿನಿಶರ್ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಅದರಲ್ಲೂ ಹಾರ್ದಿಕ್ ಪಾಂಡ್ಯ ಅವರಿಂದ ತೆರವಾಗಿರುವ ಬಿಗ್ ಹಿಟ್ಟರ್ ಸ್ಥಾನವನ್ನು ಬೇಬಿ ಎಬಿ ತುಂಬಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು.
ಆದರೀಗ ಐಪಿಎಲ್ ಮೆಗಾ ಹರಾಜು ಮುಕ್ತಾಯದ ಬೆನ್ನಲ್ಲೇ ಬೇಬಿ ಎಬಿ ಅಲಿಯಾಸ್ ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್ ಅನ್ನೇ ಮರೆತಿದ್ದಾರೆ. ಇದಾಗ್ಯೂ ಐಪಿಎಲ್ ವೇಳೆಗೆ ಬ್ರೆವಿಸ್ ಫಾರ್ಮ್ಗೆ ಮರಳಲಿದ್ದಾರಾ ಕಾದು ನೋಡಬೇಕಿದೆ.