
ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡುತ್ತಿರುವ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಬರೋಡಾ ವಿರುದ್ಧದ ಈ ಪಂದ್ಯದಲ್ಲಿ ಶತಕ ಗಳಿಸಿದ ಜುರೇಲ್ಗೆ ಇದು ಏಕದಿನ ವೃತ್ತಿಜೀವನದ ಮೊದಲ ಶತಕವಾಗಿದೆ. ಜುರೇಲ್ ಶತಕದ ಬಲದಿಂದ ಉತ್ತರ ಪ್ರದೇಶ ಬರೋಡಾ ವಿರುದ್ಧ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 359 ರನ್ ಕಲೆಹಾಕಿತು.

ಬರೋಡಾ ವಿರುದ್ಧದ ಈ ಪಂದ್ಯದಲ್ಲಿ 101 ಎಸೆತಗಳನ್ನು ಎದುರಿಸಿದ ಧ್ರುವ್ ಜುರೆಲ್ 160 ರನ್ ಬಾರಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಜುರೇಲ್ ಅವರ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು. ಈ ಇನ್ನಿಂಗ್ಸ್‌ನಲ್ಲಿ 78 ಎಸೆತಗಳಲ್ಲಿ ಶತಕ ಪೂರೈಸಿದ ಜುರೇಲ್ ಮುಂದಿನ 19 ಎಸೆತಗಳಲ್ಲಿ 100 ರಿಂದ 150 ರನ್ ಪೂರೈಸಿದರು. ಅಂದರೆ ಜುರೆಲ್ 97 ಎಸೆತಗಳಲ್ಲಿ 150 ರನ್ ಕಲೆಹಾಕಿದರು.

ಮೇಲೆ ಹೇಳಿದಂತೆ ಇದು ಧ್ರುವ್ ಜುರೆಲ್ ಅವರ ಲಿಸ್ಟ್ ಎ (ಏಕದಿನ) ವೃತ್ತಿಜೀವನದಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಹಾಗೆಯೇ ಇದು ಅವರ ಮೊದಲ ಏಕದಿನ ಶತಕವೂ ಆಗಿದೆ. ಅವರ ಹಿಂದಿನ ಅತ್ಯುತ್ತಮ ಸ್ಕೋರ್ 80 ರನ್ ಆಗಿತ್ತು. ತಮ್ಮ ವೃತ್ತಿಜೀವನದಲ್ಲಿ 12 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಜುರೇಲ್ ನಾಲ್ಕು ಅರ್ಧಶತಕಗಳು ಸೇರಿದಂತೆ 56 ಸರಾಸರಿಯಲ್ಲಿ 336 ರನ್ ಗಳಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಧ್ರುವ್ ಜುರೆಲ್ ಅವರ ಬ್ಯಾಟ್ ರನ್ಗಳ ಮಳೆ ಹರಿಸುತ್ತಿದೆ. ಇದು ಅವರ ಸತತ ಮೂರನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಇದಕ್ಕೂ ಮೊದಲು, ಡಿಸೆಂಬರ್ 24 ರಂದು ಹೈದರಾಬಾದ್ ವಿರುದ್ಧದ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಅವರು 80 ರನ್ ಬಾರಿಸಿದ್ದರು. ಆ ನಂತರ ಡಿಸೆಂಬರ್ 26 ರಂದು ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ 67 ರನ್ಗಳ ಇನ್ನಿಂಗ್ಸ್ ಆಡಿದ್ದರು.

ತಮ್ಮ ಇನ್ನಿಂಗ್ಸ್‌ನಲ್ಲಿ ಬರೋಡಾದ ಆರು ಬೌಲರ್‌ಗಳನ್ನು ಎದುರಿಸಿದ ಧ್ರುವ್ ಜುರೆಲ್, ರಸಿಕ್ ಸಲಾಂ ವಿರುದ್ಧ ಕೇವಲ 14 ಎಸೆತಗಳಲ್ಲಿ 55 ರನ್ ಬಾರಿಸಿದರೆ, ರಾಜ್ ಲಿಂಬಾನಿ ವಿರುದ್ಧ 21 ಎಸೆತಗಳಲ್ಲಿ 34 ರನ್ ಕಲೆಹಾಕಿದರು. ಹಾಗೆಯೇ ಕೃನಾಲ್ ಪಾಂಡ್ಯ ವಿರುದ್ಧ 27 ಎಸೆತಗಳಲ್ಲಿ 26 ರನ್ ಬಾರಿಸಿದರು.