
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಕ್ರಿಸ್ ವೋಕ್ಸ್ (Chris Woakes) ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಭಾರತದ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವೋಕ್ಸ್ ಪ್ರತಿಷ್ಠಿತ ಆ್ಯಶಸ್ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಲಂಡನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ವೇಳೆ ಕ್ರಿಸ್ ವೋಕ್ಸ್ ಗಾಯಗೊಂಡಿದ್ದರು. ಈ ಗಾಯದ ಹೊರತಾಗಿಯೂ ಒಂದೇ ಕೈಯಲ್ಲಿ ಬ್ಯಾಟಿಂಗ್‌ಗೆ ಆಗಮಿಸಿ ಗಮನ ಸೆಳೆದಿದ್ದರು. ಇದೀಗ ದಿಢೀರನೆ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಕ್ರಿಸ್ ವೋಕ್ಸ್, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳುವ ಸಮಯ ಬಂದಿದೆ. ಇಂಗ್ಲೆಂಡ್ ಪರ ಆಡುವುದು ನನ್ನ ಬಾಲ್ಯದ ಕನಸಾಗಿತ್ತು. ಈ ಕನಸು ನನಸಾಗಿರುವುದು ನನ್ನ ಅದೃಷ್ಟ. ಕಳೆದ 15 ವರ್ಷಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ನನಗೆ ಹಲವಾರು ಸ್ನೇಹಿತರು ಸಿಕ್ಕಿದ್ದಾರೆ. ಅವರೆಲ್ಲರಿಗೂ, ನನ್ನನ್ನು ಬೆಂಬಲಿಸಿದವರಿಗೂ ಈ ಸಂದರ್ಭದಲ್ಲಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕ್ರಿಸ್ ವೋಕ್ಸ್ ಬರೆದುಕೊಂಡಿದ್ದಾರೆ.

ಕ್ರಿಸ್ ವೋಕ್ಸ್ ಇಂಗ್ಲೆಂಡ್ ಪರ 62 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 99 ಇನಿಂಗ್ಸ್ ಆಡಿರುವ ಅವರು ಒಟ್ಟು 2034 ರನ್ ಕಲೆಹಾಕಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 192 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 122 ಪಂದ್ಯಗಳನ್ನಾಡಿರುವ ಕ್ರಿಸ್ ವೋಕ್ಸ್ 1588 ರನ್ ಕಲೆಹಾಕಿದರೆ, 173 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಇಂಗ್ಲೆಂಡ್ ಪರ 33 ಟಿ20 ಪಂದ್ಯಗಳನ್ನಾಡಿರುವ ವೋಕ್ಸ್ 147 ರನ್ ಜೊತೆ 31 ವಿಕೆಟ್ ಪಡೆದಿದ್ದಾರೆ.