
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಈಗಾಗಲೇ 2-0 ಹಿನ್ನಡೆಯಲ್ಲಿದ್ದು, ಸರಣಿಯನ್ನು ಕಳೆದುಕೊಂಡಿದೆ. ಇದೀಗ ಕ್ಲೀನ್ ಸ್ವೀಪ್ ಭಯದಲ್ಲಿದ್ದ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ನಿಗಧಿತ 50 ಓವರ್‌ಗಳಲ್ಲಿ ಬರೋಬ್ಬರಿ 414 ರನ್ ಕಲೆಹಾಕಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಜೋ ರೂಟ್ ಮತ್ತು ಜಾಕೋಬ್ ಬೆಥೆಲ್ ಭರ್ಜರಿ ಶತಕ ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಜೇಮೀ ಸ್ಮಿತ್ ಮತ್ತು ಜೋಸ್ ಬಟ್ಲರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಆಟಗಾರರಿಂದಾಗಿ ಇಂಗ್ಲೆಂಡ್ ತಂಡವು 414 ರನ್‌ಗಳ ಟಾರ್ಗೆಟ್ ನೀಡಿತು.

ಈ ಮೂಲಕ ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ 7 ನೇ ಬಾರಿಗೆ 400ಕ್ಕೂ ಅಧಿಕ ರನ್ ಗಳಿಸಿದೆ. ಇದರೊಂದಿಗೆ ಅಧಿಕ ಬಾರಿ 400ಕ್ಕೂ ಅಧಿಕ ರನ್ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ದಾಖಲೆಯನ್ನು ಸರಿಗಟ್ಟಿದೆ.

ಟೀಂ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ 7 ಬಾರಿ 400+ ರನ್ ಗಳಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 400+ ರನ್ ಗಳಿಸಿದ ವಿಶ್ವ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿದೆ. ಆಫ್ರಿಕಾ ಒಟ್ಟು 8 ಬಾರಿ ಈ ಸಾಧನೆ ಮಾಡಿದೆ. ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಎರಡು ಬಾರಿ 400+ ರನ್ ಗಳಿಸಿದರೆ, ಅದು ಆಫ್ರಿಕಾದ ದಾಖಲೆಯನ್ನು ಸುಲಭವಾಗಿ ಮುರಿಯುತ್ತದೆ.

ಇಂಗ್ಲೆಂಡ್ ತಂಡದ ಪರ ಜೋ ರೂಟ್ 100 ರನ್ ಗಳಿಸಿದರೆ, ಜಾಕೋಬ್ ಬೆಥೆಲ್ 110 ರನ್ ಗಳಿಸಿದರು. ಹಾಗೆಯೇ ಜೋಸ್ ಬಟ್ಲರ್ 32 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 62 ರನ್ ಗಳಿಸಿದರು. ಆರಂಭಿಕ ಆಟಗಾರ ಜೇಮೀ ಸ್ಮಿತ್ ಕೂಡ 62 ರನ್ ಗಳಿಸಿ ಇನ್ನಿಂಗ್ಸ್ ಆಡಿದರು.

ದಕ್ಷಿಣ ಆಫ್ರಿಕಾ ತಂಡದ ಪರ ನಾಂಡ್ರೆ ಬರ್ಗರ್ 10 ಓವರ್‌ಗಳಲ್ಲಿ 95 ರನ್‌ಗಳನ್ನು ನೀಡಿದರೆ, ಕೋಡಿ ಯೂಸುಫ್ 10 ಓವರ್‌ಗಳಲ್ಲಿ 80 ರನ್‌ಗಳನ್ನು ನೀಡಿದರು ಮತ್ತು ಈ ಇಬ್ಬರೂ ಬೌಲರ್‌ಗಳು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ವಿಯಾನ್ ಮುಲ್ಡರ್ 8 ಓವರ್‌ಗಳಲ್ಲಿ 64 ರನ್‌ಗಳನ್ನು ಬಿಟ್ಟುಕೊಟ್ಟರೆ, ಕಾರ್ಬಿನ್ ವಾಶ್ 10 ಓವರ್‌ಗಳಲ್ಲಿ 79 ರನ್‌ಗಳನ್ನು ನೀಡಿದರು.