ಬಿಸಿಸಿಐ ಮಹಿಳಾ ಕ್ರಿಕೆಟ್ಗೆ ಸಂಬಂಧಿಸಿದಂತೆ ಇಂದು ಐತಿಹಾಸಿಕ ಘೋಷಣೆಯೊಂದನ್ನು ಮಾಡಿದೆ. ಅದರ ಪ್ರಕಾರ ಇನ್ನು ಮುಂದೆ ಟೀಂ ಇಂಡಿಯಾದ ಪುರುಷ ಕ್ರಿಕೆಟಿಗರಿಗೆ ನೀಡುವಂತೆ ಮಹಿಳಾ ಕ್ರಿಕೆಟಿಗರಿಗು ಒಂದೇ ಸಮನಾದ ಪಂದ್ಯದ ಶುಲ್ಕವನ್ನು ನೀಡಲು ಮುಂದಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಇನ್ನು ಮಹಿಳಾ ಕ್ರಿಕೆಟಿಗರು ಕೂಡ ಪುರುಷ ಕ್ರಿಕೆಟಿಗರಿಗೆ ಸರಿಸಮಾನವಾಗಿ ಪಂದ್ಯ ಶುಲ್ಕ ಪಡೆಯಲಿದ್ದಾರೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಅರ್ಥಾತ್ ಈಗ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ ಅವರಂತಹ ಆಟಗಾರರ ಪಂದ್ಯದ ಶುಲ್ಕವು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಡೆದುಕೊಳ್ಳುವ ಪಂದ್ಯ ಶುಲ್ಕಕ್ಕೆ ಸಮನಾಗಿರುತ್ತದೆ.
ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಪಂದ್ಯ ಶುಲ್ಕವನ್ನು ಒಂದೇ ರೀತಿಯಲ್ಲಿ ನೀಡಬೇಕೆಂದು ಬಹುದಿನಗಳಿಂದ ಬೇಡಿಕೆಯಿದ್ದು, ಇದೀಗ ಬಿಸಿಸಿಐ ಅದನ್ನು ಈಡೇರಿಸಿದೆ. ಜೊತೆಗೆ ತಾರತಮ್ಯದ ವಿರುದ್ಧ ಬಿಸಿಸಿಐ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಜಯ್ ಶಾ ಹೇಳಿದ್ದಾರೆ.
ಹೊಸ ನೀತಿಯ ಅನ್ವಯ ಈಗ ಮಹಿಳಾ ಕ್ರಿಕೆಟಿಗರು ಪ್ರತಿ ಟೆಸ್ಟ್ ಪಂದ್ಯವನ್ನು ಆಡಲು 15 ಲಕ್ಷ ರೂಪಾಯಿಗಳನ್ನು ಪಂದ್ಯ ಶುಲ್ಕವಾಗಿ ಪಡೆಯಲಿದ್ದಾರೆ. ಈಗ ಮಹಿಳಾ ಕ್ರಿಕೆಟಿಗರು ಒಂದು ಏಕದಿನ ಪಂದ್ಯ ಆಡಿದರೆ 6 ಲಕ್ಷ ಹಾಗೂ ಒಂದು ಟಿ20 ಪಂದ್ಯವನ್ನಾಡಲು 3 ಲಕ್ಷ ರೂಗಳನ್ನು ಪಂದ್ಯ ಶುಲ್ಕವನ್ನಾಗಿ ಪಡೆಯಲ್ಲಿದ್ದಾರೆ.
ಈ ಹಿಂದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಒಂದು ಟೆಸ್ಟ್ ಪಂದ್ಯಕ್ಕೆ ಪಂದ್ಯ ಶುಲ್ಕವಾಗಿ 4 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು. ಹಾಗೆಯೇ ಪ್ರತಿ ಏಕದಿನ ಪಂದ್ಯಕ್ಕೆ 2 ಲಕ್ಷ ಮತ್ತು ಟಿ 20 ಪಂದ್ಯಕ್ಕೆ 2.5 ಲಕ್ಷ ಪಡೆಯುತ್ತಿದ್ದರು.
Published On - 1:41 pm, Thu, 27 October 22