
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಭಾರತ ಮಹಿಳಾ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಸ್ಫೋಟಕ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ತಹ್ಲಿಯಾ ಮೆಕ್ಗ್ರಾಥ್ ಬ್ಯಾಟಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಫೋಬೆ ಲಿಚ್ಫೀಲ್ಡ್ ಹಾಗೂ ಜಾರ್ಜಿಯಾ ವೊಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 130 ರನ್ಗಳ ಜೊತೆಯಾಟವಾಡಿದ ಬಳಿಕ ಫೋಬೆ ಲಿಚ್ಫೀಲ್ಡ್ (60) ಔಟಾದರು.

ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಜಾರ್ಜಿಯಾ ವೊಲ್ 87 ಎಸೆತಗಳಲ್ಲಿ 12 ಫೋರ್ಗಳೊಂದಿಗೆ 101 ರನ್ ಬಾರಿಸಿದರು. ಈ ಶತಕದ ಬೆನ್ನಲ್ಲೇ ಜಾರ್ಜಿಯಾ ಸೈಮಾ ಠಾಕೂರ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ಜಾರ್ಜಿಯಾ ವಿಕೆಟ್ ಪತನವಾಗುತ್ತಿದ್ದಂತೆ ಇತ್ತ ಎಲ್ಲಿಸ್ ಪೆರ್ರಿ ಅಬ್ಬರ ಶುರು ಮಾಡಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಪೆರ್ರಿ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 72 ಎಸೆತಗಳಲ್ಲಿ ಶತಕ ಪೂರೈಸಿದರು.

ಅಂತಿಮವಾಗಿ 75 ಎಸೆತಗಳನ್ನು ಎದುರಿಸಿದ ಎಲ್ಲಿಸ್ ಪೆರ್ರಿ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 105 ರನ್ ಬಾರಿಸಿದರು. ಈ ಆಕರ್ಷಕದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 371 ರನ್ ಕಲೆಹಾಕಿದೆ.