
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮ್ಯಾಕ್ಸ್ವೆಲ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಾಗ್ಯೂ ಅವರು ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಮುಖ್ಯ ಜಾರ್ಜ್ ಬೈಲಿ ಜೊತೆ ಮಾತನಾಡಿದ್ದೇನೆ. ಈ ವೇಳೆ 2027ರ ಏಕದಿನ ವಿಶ್ವಕಪ್ ಬಗ್ಗೆ ಚರ್ಚಿಸಿದ್ದೆವು. ಅವರು 2027ರವರೆಗೆ ನನ್ನನ್ನು ತಂಡದಲ್ಲಿ ಮುಂದುವರೆಸುತ್ತಾರೆ ಎಂದು ಭಾವಿಸುತ್ತಿಲ್ಲ. ಹೀಗಾಗಿ ನನ್ನ ಸ್ಥಾನಕ್ಕೆ ಬೇರೆಯವನ್ನು ಆಯ್ಕೆ ಮಾಡಲು ಇದು ಸೂಕ್ತ ಸಮಯ. ಇದೇ ಕಾರಣದಿಂದ ನಿವೃತ್ತಿ ಘೋಷಿಸಿರುವುದಾಗಿ ಮ್ಯಾಕ್ಸ್ವೆಲ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪರ ಈವರೆಗೆ 149 ಏಕದಿನ ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್ವೆಲ್ 136 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 3149 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 3990 ರನ್ ಕಲೆಹಾಕಿದ್ದಾರೆ. ಇದರ ನಡುವೆ ಒಂದು ದ್ವಿಶತಕ ಹಾಗೂ 4 ಶತಕ ಮತ್ತು 23 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಹಾಗೆಯೇ ಬೌಲಿಂಗ್ ಮೂಲಕ ಕೂಡ ಕೊಡುಗೆ ನೀಡಿರುವ ಗ್ಲೆನ್ ಮ್ಯಾಕ್ಸ್ವೆಲ್ 119 ಇನಿಂಗ್ಸ್ಗಳಲ್ಲಿ ಚೆಂಡೆಸೆದಿದ್ದು, ಈ ವೇಳೆ 4002 ಎಸೆತಗಳಲ್ಲಿ 3644 ರನ್ ನೀಡುವ ಮೂಲಕ ಒಟ್ಟು 77 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ನಲ್ಲಿ 3 ಸಾವಿರ ರನ್ ಹಾಗೂ 50 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಆಲ್ರೌಂಡರ್ಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಸದ್ಯ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿರುವ ಗ್ಲೆನ್ ಮ್ಯಾಕ್ಸ್ವೆಲ್ 2026ರ ಟಿ20 ವಿಶ್ವಕಪ್ ಆಡುವ ವಿಶ್ವಾಸದಲ್ಲಿದ್ದಾರೆ. ಈ ವಿಶ್ವಕಪ್ನೊಂದಿಗೆ 36 ವರ್ಷದ ಮ್ಯಾಕ್ಸಿ ಚುಟುಕು ಕ್ರಿಕೆಟ್ಗೆ ಗುಡ್ ಬೈ ಹೇಳುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮ್ಯಾಕ್ಸ್ವೆಲ್ ಆಡಲಿರುವ ಕೊನೆಯ ಟೂರ್ನಿ ಆಗಿರಲಿದೆ.