- Kannada News Photo gallery Cricket photos Cricket Legends Retire: Virat Kohli, Rohit Sharma, Glenn Maxwell and More Hang Up Boots
27 ದಿನಗಳ ಅಂತರದಲ್ಲಿ ಐವರು ದಿಗ್ಗಜ ಕ್ರಿಕೆಟಿಗರ ನಿವೃತ್ತಿ ಘೋಷಣೆ
International Cricket Retirement Wave: ಕಳೆದ ಕೆಲವು ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಿಗ್ಗಜರು ನಿವೃತ್ತಿ ಘೋಷಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಏಂಜೆಲೊ ಮ್ಯಾಥ್ಯೂಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಹೆನ್ರಿಕ್ ಕ್ಲಾಸೆನ್ ಸೇರಿದಂತೆ ಅನೇಕ ಪ್ರಮುಖ ಆಟಗಾರರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಬಹಳ ದೊಡ್ಡ ನಷ್ಟವಾಗಿದೆ.
Updated on:Jun 02, 2025 | 7:48 PM

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಿಗ್ಗಜ ಕ್ರಿಕೆಟಿಗರ ನಿವೃತ್ತಿಯ ಪರ್ವ ಶುರುವಾಗಿದೆ. ಕಳೆದ ಕೆಲವು ದಿನಗಳಲ್ಲಿ ವಿಶ್ವ ಕ್ರಿಕೆಟ್ನ ಹಲವು ದಿಗ್ಗಜ ಕ್ರಿಕೆಟಿಗರು ಒಂದಿಲ್ಲೊಂದು ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರು ಟೆಸ್ಟ್ಗೆ ವಿದಾಯ ಹೇಳಿದ್ದರು. ಇಂದು ಇಬ್ಬರು ವಿದೇಶಿ ಕ್ರಿಕೆಟಿಗರು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ನಂತರ ಈ ಮಾದರಿಗೆ ವಿದಾಯ ಹೇಳಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೇ 7 ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. ಇನ್ನು ಮುಂದೆ ರೋಹಿತ್ ಕೇವಲ ಏಕದಿನ ಕ್ರಿಕೆಟ್ ಆಡುವುದನ್ನು ಕಾಣಬಹುದು.

ರೋಹಿತ್ ಶರ್ಮಾ ನಂತರ ಮೇ 12 ರಂದು ಟೀಂ ಇಂಡಿಯಾದ ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅವರ ನಿವೃತ್ತಿ ಎಲ್ಲರಿಗೂ ಆಘಾತವನ್ನುಂಟು ಮಾಡಿತು. ವಿರಾಟ್ ಟಿ20 ವಿಶ್ವಕಪ್ ನಂತರ ಈ ಮಾದರಿಯಿಂದಲೂ ನಿವೃತ್ತರಾದ ಕಾರಣ, ಅವರು ಕೂಡ ಈಗ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ.

ಶ್ರೀಲಂಕಾದ ದಿಗ್ಗಜ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಮೇ 23 ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಮ್ಯಾಥ್ಯೂಸ್ ಶ್ರೀಲಂಕಾ ಪರ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 8167 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 45 ಅರ್ಧಶತಕಗಳು ಸೇರಿವೆ.

ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ್ದ ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಜೂನ್ 2 ರಂದು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಈಗ ಅವರು ಟಿ20 ಮಾದರಿಯಲ್ಲಿ ಮಾತ್ರ ಆಡಲಿದ್ದಾರೆ. 2023 ರ ಏಕದಿನ ವಿಶ್ವಕಪ್‌ನಲ್ಲಿ ಅವರು ಬಾಂಗ್ಲಾದೇಶ ವಿರುದ್ಧ ದ್ವಿಶತಕ ಗಳಿಸಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದರು.

ಜೂನ್ 2 ರಂದು ದಕ್ಷಿಣ ಆಫ್ರಿಕಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಕೂಡ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿರ್ಧಾರದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಕ್ಲಾಸೆನ್ ದಕ್ಷಿಣ ಆಫ್ರಿಕಾ ಪರ 4 ಟೆಸ್ಟ್, 60 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ.
Published On - 7:48 pm, Mon, 2 June 25
