- Kannada News Photo gallery Cricket photos IPL 2025 Final Rain Rules: What Happens If Weather Interrupts Play in IPL Final
IPL 2025 Final: ಫೈನಲ್ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?
IPL 2025 Final PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕಾಗಿಯೇ ಬಿಸಿಸಿಐ ಐಪಿಎಲ್ ರೈನ್ ರೂಲ್ಸ್ ಅನ್ನು ಪರಿಚಯಿಸಿದೆ. ಈ ನಿಯಮ ಐಪಿಎಲ್ ಫೈನಲ್ ಪಂದ್ಯಕ್ಖೂ ಅನ್ವಯವಾಗಲಿದೆ.
Updated on: Jun 03, 2025 | 9:53 AM

IPL 2025 Final: ಅಹಮದಾಬಾದ್‌ನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ನಡುವಣ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಅಕ್ಯೂವೆದರ್ ಪ್ರಕಾರ, ಭಾನುವಾರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಶೇ. 66 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಸಂಜೆಯ ಬಳಿಕ ಶೇ.33 ರಷ್ಟು ಮೋಡ ಕವಿದ ವಾತಾವರಣ ಕಂಡು ಬರಲಿದೆ.

ಇತ್ತ ಮಳೆ ಭೀತಿ ಹಿನ್ನಲೆಯಲ್ಲಿ ಫೈನಲ್ ಪಂದ್ಯವನ್ನು ಪೂರ್ಣಗೊಳಿಸಲು ಐಪಿಎಲ್ ರೈನ್ ರೂಲ್ಸ್ ಅನ್ನು ಪರಿಚಯಿಸಲಾಗಿದೆ. ಈ ನಿಯಮಗಳ ಮೂಲಕ ಐಪಿಎಲ್ನ ಅಂತಿಮ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಹಾಗಿದ್ರೆ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡಿದರೆ ಯಾವೆಲ್ಲಾ ನಿಯಮಗಳು ಅನ್ವಯವಾಗಲಿದೆ ಎಂದು ನೋಡೋಣ...

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯವು ರಾತ್ರಿ 7.30 ಕ್ಕೆ ಶುರುವಾಗಲಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾದರೆ ಹೆಚ್ಚುವರಿ 120 ನಿಮಿಷಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ರಾತ್ರಿ 9.40 ರೊಳಗೆ ಪಂದ್ಯ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್ಗಳನ್ನು ಆಡಲಿದೆ.

ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳನ್ನು ಆಡಿರಬೇಕು.

ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಲಿದೆ. ಅದರಂತೆ ಮಧ್ಯರಾತ್ರಿ 1.30 ರೊಳಗೆ 5 ಓವರ್ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದ್ದಾರೆ.

ಒಂದು ವೇಳೆ ಮಧ್ಯರಾತ್ರಿ 1.30 ರೊಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ಮೀಸಲು ದಿನದಾಟಕ್ಕೆ ಮುಂದೂಡಲಾಗುತ್ತದೆ. ಅದರಂತೆ ಬುಧವಾರ ಫೈನಲ್ ಪಂದ್ಯವನ್ನು ಮರು ಆಯೋಜಿಸಲಿದ್ದಾರೆ.

ಒಂದು ವೇಳೆ ಮಳೆಯಿಂದಾಗಿ ಮೀಸಲು ದಿನದಾಟದಲ್ಲೂ ಕನಿಷ್ಠ 5 ಓವರ್ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಮಾತ್ರ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ ಲೀಗ್ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.

ಅಂದರೆ ಮೀಸಲು ದಿನದಾಟದಲ್ಲೂ ಪಂದ್ಯ ನಡೆಯದಿದ್ದರೆ ಪಂಜಾಬ್ ಕಿಂಗ್ಸ್ ತಂಡ ಚಾಂಪಿಯನ್ ಆಗಲಿದೆ. ಏಕೆಂದರೆ ಈ ಬಾರಿಯ ಐಪಿಎಲ್ನ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ, ಆರ್ಸಿಬಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಮಳೆಯಿಂದಾಗಿ ಮೀಸಲು ದಿನದಾಟದಲ್ಲೂ ಪಂದ್ಯ ರದ್ದಾದರೆ ಪಂಜಾಬ್ ಕಿಂಗ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.









