
2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ನತ್ತ ಹೆಜ್ಜೆ ಇಟ್ಟಿದ್ದ ಭಾರತ ವನಿತಾ ಪಡೆ, ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಪಂದ್ಯವನ್ನು ಸೋತು ಸಂಕಷ್ಟಕ್ಕೆ ಸಿಲಿಕಿದೆ. ಟೂರ್ನಿಯಲ್ಲಿ ಉಭಯ ತಂಡಗಳ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಏಕೈಕ ಸೋಲು ಭಾರತದ ಸೆಮಿಫೈನಲ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ (PC- BCCI X).

ಆದರೆ ಕಳೆದ ಎರಡು ವಿಶ್ವಕಪ್‌ಗಳನ್ನು ನೋಡಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿದ್ದು, ಚಾಂಪಿಯನ್ ಪಟ್ಟದ ಶುಭ ಸೂಚಕವೆನ್ನಬಹುದು. ಏಕೆಂದರೆ ಕಳೆದ ಎರಡು ವಿಶ್ವಕಪ್ಗಳಲ್ಲಿ ಟೀಂ ಇಂಡಿಯಾ ತನ್ನ ಮೊದಲ ಸೋಲನ್ನು ಇದೇ ದಕ್ಷಿಣ ಆಫ್ರಿಕಾ ವಿರುದ್ಧ ಎದುರಿಸಿತ್ತು. ಆದರೆ ಕಾಕತಾಳೀಯವೆಂಬಂತೆ ಆ ಎರಡು ವಿಶ್ವಕಪ್‌ಗಳನ್ನು ಭಾರತ ಗೆದ್ದುಕೊಂಡಿದೆ (PC- BCCI X).

ಮೊದಲಿಗೆ 2025 ರಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಅನ್ನು ನೋಡುವುದಾದರೆ.. ಆತಿಥೇಯ ಭಾರತ ತಂಡವು, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಸೋಲನ್ನು ಅನುಭವಿಸಿತ್ತು. ಆದರೆ ಅದರ ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಭಾರತ ಮಹಿಳಾ ತಂಡವು ಫೈನಲ್‌ನಲ್ಲಿ ಇದೇ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.

ಇದಾದ ನಂತರ ಅಂದರೆ 2026 ರ ಪುರುಷರ ಟಿ20 ವಿಶ್ವಕಪ್ನಲ್ಲಿಯೂ ಇದೇ ಘಟನೆ ಪುನಾರವರ್ತಿಸಿತು. ಈ ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತ ತಂಡದ ಮೊದಲ ಸೋಲು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೇ ಆಗಿತ್ತು. ಆದಾಗ್ಯೂ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ, ಭಾರತ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.

ಇದೀಗ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಪಂದ್ಯಾವಳಿಯಲ್ಲಿ ಭಾರತದ ಮೊದಲ ಸೋಲಾಗಿದೆ. ಆದ್ದರಿಂದ, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೊಮ್ಮೆ ವಿಭಿನ್ನ ಸ್ವರೂಪದಲ್ಲಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದರೆ ಆಶ್ಚರ್ಯವೇನಿಲ್ಲ (PC- BCCI X).