
ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಿಗ್ ಡೀಲ್ ಕುದುರಿಸಿಕೊಂಡಿದೆ. ಆದರೆ ಅದು ಐಪಿಎಲ್ನಲ್ಲಿ ಅಲ್ಲ. ಬದಲಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನಲ್ಲಿ ಎಂಬುದು ವಿಶೇಷ.

ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇಂಗ್ಲೆಂಡ್ನ ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟಿದೆ. ನಾರ್ದರ್ನ್ ಸೂಪರ್ಚಾರ್ಜರ್ಸ್ ಫ್ರಾಂಚೈಸಿಯನ್ನು ಖರೀದಿಸಿರುವ ಕಾವ್ಯ ಮಾರನ್ ಅವರು ತಮ್ಮ ಹೊಸ ತಂಡಕ್ಕೆ ಸನ್ರೈಸರ್ಸ್ ಲೀಡ್ಸ್ ಎಂದು ಹೆಸರಿಟ್ಟಿದ್ದಾರೆ.

ಇದೀಗ ಸನ್ರೈಸರ್ಸ್ ಲೀಡ್ಸ್ ತಂಡವು ಇಂಗ್ಲೆಂಡ್ನ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಅಂದರೆ ಮುಂಬರುವ ಟೂರ್ನಿಗೂ ಮುನ್ನ ಬ್ರೂಕ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದು ಕೂಡ ಬರೋಬ್ಬರಿ 5.65 ಕೋಟಿ ರೂ.ಗೆ ಎಂಬುದು ವಿಶೇಷ.

ಹ್ಯಾರಿ ಬ್ರೂಕ್ ಕಳೆದ ಸೀಸನ್ನಲ್ಲಿ ನಾರ್ದರ್ನ್ ಸೂಪರ್ಚಾರ್ಜರ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಅವರು ತಂಡದ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಇದೀಗ ಫ್ರಾಂಚೈಸಿ ಬದಲಾದರೂ ಬ್ರೂಕ್ ಅವರನ್ನು £470,000 (ಸುಮಾರು 5.65 ಕೋಟಿ ರೂ.) ಗೆ ತಂಡದಲ್ಲೇ ಉಳಿಸಿಕೊಳ್ಳಲು ಸನ್ರೈಸರ್ಸ್ ಲೀಡ್ಸ್ ನಿರ್ಧರಿಸಿದೆ. ಅದರಂತೆ ಮುಂಬರುವ ಸೀಸನ್ನಲ್ಲಿ ಹ್ಯಾರಿ ಬ್ರೂಕ್ ಸನ್ರೈಸರ್ಸ್ ಲೀಡ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಈ ಬಾರಿಯ ಐಪಿಎಲ್ನಲ್ಲಿ ಹ್ಯಾರಿ ಬ್ರೂಕ್ ಕಾಣಿಸಿಕೊಳ್ಳುವುದಿಲ್ಲ ಎಂಬುದು. ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಬ್ರೂಕ್ ವಿನಾಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿದ್ದರು. ಐಪಿಎಲ್ನ ಹೊಸ ನಿಯಮದ ಪ್ರಕಾರ, ಹರಾಜಿನಲ್ಲಿ ಆಯ್ಕೆಯಾದ ಬಳಿಕ ಟೂರ್ನಿಯಿಂದ ಹೊರಗುಳಿಯುವಂತಿಲ್ಲ. ಹೀಗೆ ಹೊರಗುಳಿದರೆ ಅವರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಅದರಂತೆ ಇದೀಗ ಹ್ಯಾರಿ ಬ್ರೂಕ್ ಮೇಲೆ 2 ವರ್ಷಗಳ ನಿಷೇಧ ಹೇರಲಾಗಿದೆ.