
ಐಸಿಸಿ ಏಕದಿನ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಲ್ವರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿರುವುದು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಂಬುದು ವಿಶೇಷ.

ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರೋಹಿತ್ ಶರ್ಮಾ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇದೇ ಸರಣಿಯಲ್ಲಿ 2 ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿ ಮಿಂಚಿದ್ದ ಕಿಂಗ್ ಕೊಹ್ಲಿ 2 ಸ್ಥಾನಗಳನ್ನು ಮೇಲೇರಿದ್ದಾರೆ.

ವಿಶೇಷ ಎಂದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಸಿಸಿ ರ್ಯಾಂಕಿಂಗ್ ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು 4ನೇ ಬಾರಿ. ಇದಕ್ಕೂ ಮುನ್ನ 2018, 2019 ಮತ್ತು 2020ರ ಏಕದಿನ ಬ್ಯಾಟರ್ ಗಳ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರೆ, ರೋಹಿತ್ ಶರ್ಮಾ ದ್ವಿತೀಯ ಸ್ಥಾನ ಅಲಂಕರಿಸಿದ್ದರು. ಇದೀಗ 5 ವರ್ಷಗಳ ಬಳಿಕ ರೋಹಿತ್ ಶರ್ಮಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಐಸಿಸಿ ಏಕದಿನ ಬ್ಯಾಟರ್ಗಳ ನೂತನ ರ್ಯಾಂಕಿಂಗ್ನಲ್ಲಿ ಟಾಪ್-5 ನಲ್ಲಿ ಕಾಣಿಸಿಕೊಂಡಿರುವ ಬ್ಯಾಟ್ಸ್ಮನ್ಗಳ ಪಟ್ಟಿ ಈ ಕೆಳಗಿನಂತಿದೆ...

ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಹಿಟ್ಮ್ಯಾನ್ 781 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದ್ದು, ಈ ಮೂಲಕ 38ನೇ ವಯಸ್ಸಿನಲ್ಲಿ ಪಾರುಪತ್ಯ ಮೆರೆದಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಇದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಕಿಂಗ್ ಕೊಹ್ಲಿ ಒಟ್ಟು 773 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಟಾಪ್-2 ಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಮೂರನೇ ಸ್ಥಾನದಲ್ಲಿ ನ್ಯೂಝಿಲೆಂಡ್ನ ಡೇರಿಲ್ ಮಿಚೆಲ್ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಮಿಚೆಲ್ ಈ ಬಾರಿ 15 ಅಂಕಗಳ ಕುಸಿತ ಕಂಡಿದ್ದಾರೆ. ಅದರಂತೆ ಇದೀಗ 766 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.

ನಾಲ್ಕನೇ ಸ್ಥಾನವನ್ನು ಅಫ್ಘಾನಿಸ್ತಾನದ ಯುವ ದಾಂಡಿಗ ಇಬ್ರಾಹಿಂ ಝದ್ರಾನ್ ಅಲಂಕರಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಝದ್ರಾನ್ ಒಟ್ಟು 764 ಅಂಕಗಳೊಂದಿಗೆ ಐಸಿಸಿಯ ನೂತನ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಐದನೇ ಸ್ಥಾನದಲ್ಲಿ ಭಾರತ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಇದ್ದಾರೆ. ಚಾಂಪಿಯನ್ ಟ್ರೋಫಿ ಟೂರ್ನಿಯ ಬೆನ್ನಲ್ಲೇ ಅಗ್ರಸ್ಥಾನಕ್ಕೇರಿದ್ದ ಗಿಲ್ ಆಸ್ಟ್ರೇಲಿಯಾ ಸರಣಿಯಲ್ಲಿ ವಿಫಲರಾಗಿದ್ದರು. ಅದರ ಪರಿಣಾಮ ಇದೀಗ 723 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಂಡ ನಾಲ್ಕನೇ ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್ 679 ಅಂಕಗಳೊಂದಿಗೆ 10ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
Published On - 7:35 am, Thu, 11 December 25