ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಅದು ಕೂಡ ಕಳೆದ ನಾಲ್ಕು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದೇ ವಿಶೇಷ.
ಇತ್ತೀಚೆಗೆ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ಅ್ಯಂಡರ್ಸನ್ ಇದೀಗ 866 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದರೊಂದಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಅ್ಯಂಡರ್ಸನ್ ಪಾಲಾಗಿದೆ.
ಅಂದರೆ ಈ ಹಿಂದೆ 1936 ರಲ್ಲಿ ಆಸ್ಟ್ರೇಲಿಯಾದ ಶ್ರೇಷ್ಠ ಕ್ಲಾರಿ ಗ್ರಿಮ್ಮೆಟ್ ಅವರು 40ನೇ ವಯಸ್ಸಿನಲ್ಲಿ ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದರು. ಇದೀಗ ಜೇಮ್ಸ್ ಅ್ಯಂಡರ್ಸನ್ (40 ವರ್ಷ 207 ದಿನಗಳು) ಈ ದಾಖಲೆ ಮುರಿದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಐಸಿಸಿ ಟೆಸ್ಟ್ ಬೌಲರ್ಗಳ ಟಾಪ್-5 ಶ್ರೇಯಾಂಕ ಪಟ್ಟಿ ಈ ಕೆಳಗಿನಂತಿದೆ.
1- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್) - 866 ಅಂಕಗಳು
2- ರವಿಚಂದ್ರನ್ ಅಶ್ವಿನ್ (ಭಾರತ)- 864 ಅಂಕಗಳು
3- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 858 ಅಂಕಗಳು
4- ಒಲಿ ರಾಬಿನ್ಸನ್ (ಇಂಗ್ಲೆಂಡ್)- 820 ಅಂಕಗಳು
5- ಜಸ್ಪ್ರೀತ್ ಬುಮ್ರಾ (ಭಾರತ)- 795 ಅಂಕಗಳು
ಇಂಗ್ಲೆಂಡ್ ಪರ 178 ಟೆಸ್ಟ್ ಪಂದ್ಯಗಳನ್ನು ಆಡಿರುವ ಜೇಮ್ಸ್ ಅ್ಯಂಡರ್ಸನ್ 682 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯು ಕೂಡ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ.