Updated on: Feb 22, 2023 | 10:58 PM
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 31 ರಿಂದ ಪ್ರಾರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಇದು ಮಹೇಂದ್ರ ಸಿಂಗ್ ಧೋನಿಯ ಕೊನೆಯ ಐಪಿಎಲ್ ಎನ್ನಲಾಗುತ್ತಿದೆ.
ಇದೇ ಕಾರಣದಿಂದಾಗಿ ಸಿಎಸ್ಕೆ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಹೊಸ ನಾಯಕರುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರೆಂದರೆ ಬೆನ್ ಸ್ಟೋಕ್ಸ್.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿರುವ ಬೆನ್ ಸ್ಟೋಕ್ಸ್ ಅವರು ಈ ಬಾರಿ ಸಿಎಸ್ಕೆ ತಂಡದ ಸಾರಥ್ಯವಹಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇದರ ನಡುವೆ ಸ್ಟೋಕ್ಸ್ ನೀಡಿರುವ ಹೇಳಿಕೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಕ್ಕಟಿಗೆ ಸಿಲುಕಿದೆ.
ಹೌದು, ಇದೇ ಮೊದಲ ಬಾರಿಗೆ ಸಿಎಸ್ಕೆ ತಂಡಕ್ಕೆ ಆಯ್ಕೆಯಾಗಿರುವ ಸ್ಟೋಕ್ಸ್ ಇಡೀ ಟೂರ್ನಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ಲೀಗ್ ಹಂತದ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದೇನೆ. ಆದರೆ ಪ್ಲೇಆಫ್ ಆಡುವುದರ ಬಗ್ಗೆ ಖಚಿತತೆ ಇಲ್ಲ ಎಂಬ ಸೂಚನೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೊನೆಯ ಲೀಗ್ ಪಂದ್ಯ ನಡೆಯುವುದು ಮೇ 20 ರಂದು. ಇದಾದ ಬಳಿಕ ಬೆನ್ ಸ್ಟೋಕ್ಸ್ ಇಂಗ್ಲೆಂಡ್ಗೆ ತೆರಳುವ ಸೂಚನೆ ನೀಡಿದ್ದಾರೆ. ಜೂನ್ 1 ರಿಂದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಶುರುವಾಗಲಿದೆ. ಅದಕ್ಕೂ ಮುನ್ನ ಇಂಗ್ಲೆಂಡ್ಗೆ ತೆರಳಲು ಬೆನ್ ಸ್ಟೋಕ್ಸ್ ಬಯಸಿದ್ದಾರೆ.
ಇತ್ತ ಐಪಿಎಲ್ ಫೈನಲ್ ನಡೆಯುವುದು ಮೇ 28 ರಂದು. ಇದಾಗ್ಯೂ ಪ್ಲೇಆಫ್ ಮುಂಚಿತವಾಗಿ ತವರಿಗೆ ತೆರಳುವ ಪ್ಲ್ಯಾನ್ ರೂಪಿಸಿದ್ದಾರೆ ಬೆನ್ ಸ್ಟೋಕ್ಸ್. ಇದೀಗ ತಂಡದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಆಲ್ರೌಂಡರ್ ಆಟಗಾರ ಪ್ಲೇಆಫ್ ಮುನ್ನ ತಂಡ ತೊರೆದರೆ ಅದು ಟೀಮ್ ಪಾಲಿಗೆ ಹಿನ್ನಡೆಯಾಗಲಿದೆ. ಹೀಗಾಗಿ ಐಪಿಎಲ್ ಶುರುವಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬೆನ್ ಸ್ಟೋಕ್ಸ್ ಅವರ ಮನವೊಲಿಸಲಿದೆಯಾ ಕಾದು ನೋಡಬೇಕಿದೆ.