ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ಬುಧವಾರದಿಂದ ಆರಂಭವಾಗಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ 2-0 ಮುನ್ನಡೆ ಪಡೆದುಕೊಂಡು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನೊಂದು ಪಂದ್ಯ ಭಾರತ ಗೆದ್ದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಏರಲಿದೆ.
ಹೀಗೆ ಅನೇಕ ಕಾರಣಗಳಿಂದ ಉಭಯ ತಂಡಗಳಿಗೆ ಮೂರನೇ ಟೆಸ್ಟ್ ಸರಣಿ ಬಹಳ ಮುಖ್ಯವಾಗಿದೆ. ಅಂತೆಯೆ ಕೆಲ ಆಟಗಾರರಿಗೆ ಇಂಡೋ- ಆಸೀಸ್ ಕೊನೆಯ ಟೆಸ್ಟ್ ಆಗಿರಲಿದೆ. ಮುಖ್ಯವಾಗಿ ಭಾರತದ ಈ ಮೂವರು ಆಟಗಾರರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿ ಮುಗಿದ ಬಳಿಕ ವಿದಾಯ ಹೇಳುವ ಸಾಧ್ಯತೆ ಇದೆ. ಅವರು ಯಾರು ಎಂಬುದನ್ನು ನೋಡೋಣ.
ರವಿಚಂದ್ರನ್ ಅಶ್ವಿನ್: ಟೆಸ್ಟ್ ಕ್ರಿಕೆಟ್ನಲ್ಲಿ ಆರ್. ಅಶ್ವಿನ್ ಈಗಲೂ ಒಬ್ಬ ಅಪಾಯಕಾರಿ ಸ್ಪಿನ್ನರ್ ಎಂಬುದರಲ್ಲಿ ಅನುಮಾನವಿಲ್ಲ. ಅಗತ್ಯವಿದ್ದರೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಅಶ್ವಿನ್ಗೆ ಈಗ 36 ವರ್ಷ. ಅಲ್ಲದೆ ಅಶ್ವಿನ್ ಜಾಗ ತುಂಬಲು ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿದ್ದಾರೆ.
ಅಶ್ವಿನ್ ಸ್ಪಿನ್ ಸ್ಥಾನ ತುಂಬಲು ಕುಲ್ದೀಪ್ ಯಾದವ್ ಕೂಡ ಕಾದು ಕುಳಿತಿದ್ದಾರೆ. ಹೀಗಾಗಿ ಆರ್. ಅಶ್ವಿನ್ ಈ ಟೆಸ್ಟ್ ಸರಣಿ ಮುಗಿದ ಬಳಿಕ ರೆಡ್ ಬಾಲ್ ಕ್ರಿಕೆಟ್ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.
ಜಯದೇವ್ ಉನಾದ್ಕಟ್: ಈ ಟೆಸ್ಟ್ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ನೀಡಬಹುದಾದ ಮೊದಲ ಆಟಗಾರ ಜಯದೇವ್ ಉನಾದ್ಕಟ್. ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ 10 ವರ್ಷದ ನಂತರ ಅವಕಾಶ ಪಡೆದ ಉನಾದ್ಕಟ್ ಇದುವರೆಗೆ ಆಡಿದ್ದು ಕೇವಲ ಎರಡು ಪಂದ್ಯ. ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ ನಂತರ ಇವರು ಮತ್ತೆ ಟೀಮ್ ಇಂಡಿಯಾಕ್ಕೆ ಆಯ್ಕೆ ಆಗುವುದು ಅನುಮಾನ. ಹೀಗಾಗಿ ಭಾರತ-ಆಸೀಸ್ ಟೆಸ್ಟ್ ಬಳಿಕ ನಿವೃತ್ತಿ ಘೋಷಿಸಬಹುದು.
ಉಮೇಶ್ ಯಾದವ್: ಭಾರತ-ಆಸ್ಟ್ರೇಲಿಯಾ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಬಹುದಾದ ಮತ್ತೊಬ್ಬ ಕ್ರಿಕೆಟಿಗ ಉಮೇಶ್ ಯಾದವ್. ಕಳೆದ ವರ್ಷವೇ ಇವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ, ಕೌಂಟಿ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಪರಿಣಾಮ ಪುನಃ ತಂಡಕ್ಕೆ ಆಯ್ಕೆ ಮಾಡಲಾಯಿತು.
ಟೀಮ್ ಇಂಡಿಯಾದಲ್ಲಿ ಈಗಾಗಲೇ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಥಾಕೂರ್ರಂತಹ ವೇಗಿಗಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಮೇಶ್ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ. ಇದರಿಂದ ನಿವೃತ್ತಿ ಘೋಷಿಸಬಹುದು.