- TV9 Kannada Kannada News Photos Cricket Photos IPL 2023 Kannada: Top Cricketers Who Will Miss IPL 2023
IPL 2023: ಐಪಿಎಲ್ನಿಂದ ನಾಲ್ವರು ಔಟ್: ಇಬ್ಬರು ಡೌಟ್
IPL 2023 Kannada: ಕೆಲ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಕೂಡ ಖಚಿತತೆ ಇಲ್ಲ. ಏಕೆಂದರೆ ಕೆಲವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಚೇತರಿಸಿಕೊಂಡರೆ ಮಾತ್ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on: Feb 27, 2023 | 10:30 PM

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಐಪಿಎಲ್ ಫ್ರಾಂಚೈಸಿಗಳಿಗೆ ಹೊಸ ಚಿಂತೆ ಶುರುವಾಗಿದೆ. ಅದುವೇ ಆಟಗಾರರ ಗಾಯದ ಸಮಸ್ಯೆ. ಏಕೆಂದರೆ ಈಗಾಗಲೇ ನಾಲ್ವರು ಆಟಗಾರರು ಐಪಿಎಲ್ನಿಂದ ಹೊರಗುಳಿದಿದ್ದಾರೆ. ಈ ನಾಲ್ವರು ಕೂಡ ಪ್ಲೇಯಿಂಗ್ ಇಲೆವೆನ್ನ ಭಾಗವಾಗಬಲ್ಲ ಸ್ಟಾರ್ ಆಟಗಾರರು ಎಂಬುದೇ ವಿಶೇಷ.

ಇನ್ನು ಕೆಲ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಕೂಡ ಖಚಿತತೆ ಇಲ್ಲ. ಏಕೆಂದರೆ ಕೆಲವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಚೇತರಿಸಿಕೊಂಡರೆ ಮಾತ್ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಐಪಿಎಲ್ನಿಂದ ಇದುವರೆಗೆ ಹೊರಗುಳಿದಿರುವ ಆಟಗಾರರ ಪಟ್ಟಿ ಹೀಗಿದೆ...

ರಿಷಭ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್): ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕೆಲ ತಿಂಗಳ ಹಿಂದೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿದಿದ್ದಾರೆ.

ಕೈಲ್ ಜೇಮಿಸನ್ (ಚೆನ್ನೈ ಸೂಪರ್ ಕಿಂಗ್ಸ್): ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಕೂಡ ಗಾಯಗೊಂಡಿದ್ದಾರೆ. ಮೊಣಕಾಲಿನ ನೋವಿನ ಸಮಸ್ಯೆಯಿಂದ ಈಗಾಗಲೇ ನ್ಯೂಜಿಲೆಂಡ್ ತಂಡದಿಂದ ಹೊರಗುಳಿದಿರುವ ಜೇಮಿಸನ್ ಕೂಡ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್): ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಪಾದದ ನೋವಿನ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಪರ ಕನ್ನಡಿಗ ಕೂಡ ಕಣಕ್ಕಿಳಿಯುವುದಿಲ್ಲ.

ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್): ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಪರ ಯಾರ್ಕರ್ ಮಾಂತ್ರಿಕ ಕೂಡ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.

ಪ್ಯಾಟ್ ಕಮಿನ್ಸ್ (ಕೊಲ್ಕತ್ತಾ ನೈಟ್ ರೈಡರ್ಸ್): ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ತಾಯಿಯ ಅನಾರೋಗ್ಯದ ನಿಮಿತ್ತ ಅರ್ಧದಲ್ಲೇ ಸರಣಿ ತೊರೆದು ಆಸ್ಟ್ರೇಲಿಯಾಗೆ ಮರಳಿದ್ದರು. ಇದೀಗ ಐಪಿಎಲ್ ವೇಳೆಗೆ ಅವರು ಹಿಂತಿರುಗುವುದು ಅನುಮಾನ ಎನ್ನಲಾಗಿದೆ.

ಜೋಶ್ ಲಿಟಲ್ (ಗುಜರಾತ್ ಟೈಟಾನ್ಸ್): ಚೊಚ್ಚಲ ಬಾರಿಗೆ ಐಪಿಎಲ್ ಆಡುವ ನಿರೀಕ್ಷೆಯಲ್ಲಿದ್ದ ಐರ್ಲೆಂಡ್ ತಂಡದ ಎಡಗೈ ವೇಗಿ ಜೋಶ್ ಲಿಟಲ್ ಮಂಡಿರಜ್ಜು ಬಿಗಿತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹೊರಗುಳಿದಿದ್ದಾರೆ. ಇನ್ನು ಮಾರ್ಚ್ ಅಂತ್ಯದ ವೇಳೆಗೆ ಗುಣಮುಖರಾದರೆ ಮಾತ್ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

TV9 Kannada
Read More