Updated on: Feb 27, 2023 | 8:32 PM
ಕೇಪ್ಟೌನ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾವನ್ನು ಬಗ್ಗು ಬಡಿದು ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಭರ್ಜರಿ ಗೆಲುವಿನ ರುವಾರಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ್ತಿ ಬೆತ್ ಮೂನಿ.
ಫೈನಲ್ ಫೈಟ್ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಬೆತ್ ಮೂನಿ 53 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್ನೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಆಕರ್ಷಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 156 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 137 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆಸ್ಟ್ರೇಲಿಯಾ 19 ರನ್ಗಳಿಂದ ಜಯ ಸಾಧಿಸಿ ವಿಶ್ವ ಕಿರೀಟವನ್ನು ತನ್ನದಾಗಿಸಿಕೊಂಡಿತು.
ಅತ್ಯುತ್ತಮ ಇನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆತ್ ಮೂನಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವಿಶೇಷ ಎಂದರೆ ಈ ಅರ್ಧಶತಕದ ಇನಿಂಗ್ಸ್ನೊಂದಿಗೆ ಆಸೀಸ್ ಆಟಗಾರ್ತಿ, ವಿರಾಟ್ ಕೊಹ್ಲಿಯ ವಿಶೇಷ ವಿಶ್ವ ದಾಖಲೆಯನ್ನು ಸರಿಗಟ್ಟಿದರು.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ 2 ಟೂರ್ನಿಯಲ್ಲಿ ಮೂರು-ಮೂರು ಅರ್ಧಶತಕಗಳನ್ನು ಬಾರಿಸಿದ ವಿಶೇಷ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 2014 ಮತ್ತು 2016ರ ವಿಶ್ವಕಪ್ನಲ್ಲಿ ರಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಬೆತ್ ಮೂನಿ ಸರಿಗಟ್ಟಿರುವುದು ವಿಶೇಷ.
2020 ಮತ್ತು 2023ರ ಟಿ20 ವಿಶ್ವಕಪ್ಗಳಲ್ಲಿ ಬೆತ್ ಮೂನಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಸತತವಾಗಿ ಎರಡು ವಿಶ್ವಕಪ್ಗಳಲ್ಲಿ 3 ಹಾಫ್ ಸೆಂಚುರಿ (ಒಟ್ಟು 6+) ಬಾರಿಸಿದ ವಿರಾಟ್ ಕೊಹ್ಲಿಯ ವಿಶೇಷ ವಿಶ್ವ ದಾಖಲೆಯನ್ನು ಮೂನಿ ಸರಿಗಟ್ಟಿದರು.
ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಬೆತ್ ಮೂನಿ ಮುನ್ನಡೆಸಲಿರುವುದು ವಿಶೇಷ.