ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಮಾರ್ಚ್ 1 ರಿಂದ ಶುರುವಾಗಲಿದೆ. ಇಂದೋರ್ನ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ವಿಶೇಷ ಪಿಚ್ ಅನ್ನು ರೂಪಿಸಲಾಗಿದೆ ಎಂದು ವರದಿಯಾಗಿದೆ.
ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಪಿಚ್ ಸಿದ್ಧಪಡಿಸಲು ಎಂಪಿಸಿಎ ಮುಂಬೈನಿಂದ ವಿಶೇಷ ಕೆಂಪು ಮಣ್ಣಿನ್ನು ತರಿಸಿಕೊಂಡಿದೆ. ಈ ಪಿಚ್ ವಾಂಖೆಡೆ ಅಥವಾ ಬ್ರಬೋರ್ನ್ ಸ್ಟೇಡಿಯಂಗಳಲ್ಲಿ ಕಂಡುಬರುವಂತೆ ಬಹಳಷ್ಟು ಬೌನ್ಸಿ ಆಗಿರಲಿದೆ. ಇದರಿಂದ ವೇಗದ ಬೌಲರ್ಗಳು ಸಂಪೂರ್ಣ ನೆರವು ಪಡೆಯಬಹುದು.
ಇದಕ್ಕೂ ಮುನ್ನ ನಡೆದ ನಾಗ್ಪುರ ಟೆಸ್ಟ್ ಹಾಗೂ ದೆಹಲಿ ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ ಬೌಲರ್ಗಳು ಮಿಂಚಿದ್ದರು. ಆದರೆ ಇಂದೋರ್ ಟೆಸ್ಟ್ ಪಂದ್ಯಕ್ಕಾಗಿ ಚೆಂಡು ಪುಟಿದೇಳುವ ಬೌನ್ಸಿ ಪಿಚ್ಗಳನ್ನು ರೂಪಿಸಲಾಗಿದೆ. ಅತ್ತ ವೇಗದ ಬೌಲಿಂಗ್ಗೆ ಅತ್ಯುತ್ತಮವಾಗಿ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಇದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.
ಇನ್ನು ಇಂದೋರ್ನಲ್ಲಿ ಸಿದ್ಧಪಡಿಸಲಾಗಿರುವ ಪಿಚ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುವ ತಂಡವು ಕನಿಷ್ಠ 350 ರನ್ ಕಲೆಹಾಕುವ ನಿರೀಕ್ಷೆಯಿದೆ. ಅಂದರೆ ಹೋಲ್ಕರ್ ಮೈದಾನದ ಪಿಚ್ ವೇಗದ ಬೌಲರ್ಗಳಿಗೆ ಎಷ್ಟು ಸಹಕಾರಿಯೋ, ಹಾಗೆಯೇ ಬ್ಯಾಟರ್ಗಳಿಗೂ ಹೆಚ್ಚಿನ ನೆರವು ನೀಡಲಿದೆ.
ಏಕಪಕ್ಷೀಯವಾಗಿ ನಡೆದಿದ್ದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿತ್ತು. ಅದರಲ್ಲೂ 2 ಪಂದ್ಯಗಳು ಕೇವಲ 3 ದಿನಗಳಲ್ಲಿ ಅಂತ್ಯಗೊಂಡಿತ್ತು. ಅತ್ತ ನಾಗ್ಪುರ ಹಾಗೂ ದೆಹಲಿ ಪಿಚ್ಗೆ ಐಸಿಸಿ ಮತ್ತು ಅದರ ಮ್ಯಾಚ್ ರೆಫರಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ 'ಸರಾಸರಿ' ರೇಟಿಂಗ್ ನೀಡಿದ್ದರು.
ಇದೇ ಕಾರಣದಿಂದಾಗಿ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಅತ್ಯುತ್ತಮ ಪಿಚ್ ಸಿದ್ಧಪಡಿಸಲು ಬಿಸಿಸಿಐ ಸೂಚಿಸಿತ್ತು. ಇದೀಗ ವೇಗದ ಬೌಲರ್ಗಳಿಗೆ ಹಾಗೂ ಬ್ಯಾಟರ್ಗಳಿಗೆ ಸಹಕಾರಿಯಾಗುವ ಪಿಚ್ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ಇಲ್ಲಿ ಬ್ಯಾಟರ್ಗಳು ಮೇಲುಗೈ ಸಾಧಿಸಲಿದ್ದಾರಾ ಅಥವಾ ಬೌಲರ್ಗಳು ಮಿಂಚಲಿದ್ದಾರಾ ಎಂಬುದು ಮಾರ್ಚ್ 1 ರಿಂದ ಗೊತ್ತಾಗಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಮ್ಯಾಟ್ ರೆನ್‌ಶಾ, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್
Published On - 9:53 pm, Mon, 27 February 23