ಪಿಂಕ್ ಬಾಲ್ ಅಲ್ಲ… ಈ ಬಾರಿ ಭಾರತ vs ಆಸ್ಟ್ರೇಲಿಯಾ ನಡುವೆ ಪಿಂಕ್ ಟೆಸ್ಟ್
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ದಾಖಲಿಸಿತು. ಇನ್ನು ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡರೆ, ನಾಲ್ಕನೇ ಪಂದ್ಯದಲ್ಲಿ ಆಸೀಸ್ ಪಡೆ 184 ರನ್ಗಳ ಅಮೋಘ ಗೆಲುವು ದಾಖಲಿಸಿದ. ಇದೀಗ ಉಭಯ ತಂಡಗಳು 5ನೇ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗಿದೆ.
1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಈ ಪಂದ್ಯವು ಜನವರಿ 3 ರಿಂದ ಶುರುವಾಗಲಿದೆ. ವಿಶೇಷ ಎಂದರೆ ಈ ಪಂದ್ಯವು ಪಿಂಕ್ ಟೆಸ್ಟ್. ಆದರೆ ಇದು ಪಿಂಕ್ ಬಾಲ್ ಟೆಸ್ಟ್ ಅಲ್ಲ. ಅಂದರೆ ಪಿಂಕ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಬ್ಯಾಗಿ ಕ್ಯಾಪ್ನೊಂದಿಗೆ ಕಣಕ್ಕಿಳಿಯಲಿದ್ದಾರೆ.
2 / 6
ಪಿಂಕ್ ಬಾಲ್ ಟೆಸ್ಟ್ ಎಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತಿದೆ.
3 / 6
ಪಿಂಕ್ ಟೆಸ್ಟ್ ಎಂದರೆ, ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದು. ಇದರ ಉದ್ದೇಶ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದು.
4 / 6
ಇಂತಹದೊಂದು ಅಭಿಯಾನಕ್ಕೆ ನಾಂದಿಯಾಡಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್ಗ್ರಾಥ್ ಎಂಬುದು ವಿಶೇಷ. ಮೆಕ್ಗ್ರಾಥ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ ಅವರು ಸ್ತನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಆ ಬಳಿಕ ಮೆಕ್‌ಗ್ರಾತ್ ಫೌಂಡೇಶನ್ ಸ್ಥಾಪಿಸಿದ ಗ್ಲೆನ್ ಮೆಕ್ಗ್ರಾಥ್ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವು ನೀಡುತ್ತಾ ಬರುತ್ತಿದ್ದಾರೆ.
5 / 6
ಈ ಅಭಿಯಾನಕ್ಕೆ ಸಿಡ್ನಿ ಕ್ರಿಕೆಟ್ ಕೂಡ ಸಾಥ್ ನೀಡಿದ್ದು, ಈ ಮೂಲಕ ಪ್ರತಿ ವರ್ಷ ಪಿಂಕ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಈ ಪಂದ್ಯಕ್ಕಾಗಿ ಸಿಡ್ನಿ ಸ್ಟೇಡಿಯಂನ ಗ್ಯಾಲರಿಗಳನ್ನು ಪಿಂಕ್ ಬಣ್ಣಗಳಿಂದ ಅಲಂಕೃತಗೊಳಿಸಲಾಗುತ್ತದೆ. ಹಾಗೆಯೇ ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಂದು ಲೇಡೀಸ್ ಸ್ಟ್ಯಾಂಡ್ ಅನ್ನು ತಾತ್ಕಾಲಿಕವಾಗಿ ಜೇನ್ ಮೆಕ್‌ಗ್ರಾತ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುತ್ತದೆ.
6 / 6
ಇನ್ನು ಈ ಪಂದ್ಯದಲ್ಲಿ ಆಟಗಾರರು ಧರಿಸಿದ ಪಿಂಕ್ ಕ್ಯಾಪ್ ಅನ್ನು ಕೂಡ ಹರಾಜಾಗಿಡಲಾಗುತ್ತದೆ. ಇದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುವುದಿಲ್ಲ. ಬದಲಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಬಳಸಲಾಗುವ ರೆಡ್ ಬಾಲ್ನಲ್ಲೇ ಈ ಪಂದ್ಯವನ್ನು ಆಯೋಜಿಸಲಾಗುತ್ತದೆ.