
ಭಾರತ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ಒಂದು ದಿನ ಮಾತ್ರ. ಶುಕ್ರವಾರ ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಮೂಲಕ 5 ಮ್ಯಾಚ್ಗಳ ಸರಣಿಗೆ ಚಾಲನೆ ದೊರೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಿದ್ದರೆ 'ರೂಟ್' ಕೀಳಬೇಕಿರುವುದು ಅತ್ಯಗತ್ಯ.

ಅಂದರೆ ಜೋ ರೂಟ್ ಅವರನ್ನು ಸಾಧ್ಯವಾದಷ್ಟು ಬೇಗನೆ ಔಟ್ ಮಾಡಲೇಬೇಕು. ಏಕೆಂದರೆ ಇಂಡೊ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇರುವುದು ರೂಟ್ ಹೆಸರಿನಲ್ಲಿ. ಬಲಗೈ ದಾಂಡಿಗ ಈಗಾಗಲೇ ಲೆಜೆಂಡ್ ಸುನಿಲ್ ಗವಾಸ್ಕರ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ ವಿರುದ್ಧ ಈವರೆಗೆ 30 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 55 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 2846 ರನ್ಗಳು. ಅಂದರೆ ಪ್ರತಿ ಪಂದ್ಯದ ರನ್ ಸರಾಸರಿ ಬರೋಬ್ಬರಿ 58.08 ರನ್ಗಳು. ಇದರ ನಡುವೆ 10 ಶತಕಗಳು ಹಾಗೂ 11 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಟೀಮ್ ಇಂಡಿಯಾ ವಿರುದ್ಧ ಜೋ ರೂಟ್ ಎದುರಿಸಿರುವ ಎಸೆತಗಳು. ಅಂದರೆ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೂಟ್ ಈವರೆಗೆ 5171 ಎಸೆತಗಳನ್ನು ಎದುರಿಸಿದ್ದಾರೆ. ಅಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ 5 ಸಾವಿರಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿರುವುದು ಕೇವಲ 3 ಬ್ಯಾಟರ್ಗಳು ಮಾತ್ರ.

ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಲೆಜೆಂಡ್ ಸುನಿಲ್ ಗವಾಸ್ಕರ್ (6245 ಬಾಲ್ಸ್) ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಸ್ಟರ್ ಕುಕ್ (5374 ಬಾಲ್ಸ್) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಈ ಶತಮಾನದಲ್ಲಿ ಟೀಮ್ ಇಂಡಿಯಾ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಏಕೈಕ ಬ್ಯಾಟರ್ ಜೋ ರೂಟ್. ಇದಕ್ಕೆ ಸಾಕ್ಷಿ ಭಾರತದ ವಿರುದ್ಧ 5171 ಎಸೆತಗಳಲ್ಲಿ ಕ್ರೀಸ್ ಕಚ್ಚಿ ನಿಂತು 2846 ರನ್ ಕಲೆಹಾಕಿರುವುದು.

ಹಾಗೆಯೇ ಟೀಮ್ ಇಂಡಿಯಾ ವಿರುದ್ಧ 55 ಟೆಸ್ಟ್ ಇನಿಂಗ್ಸ್ ಆಡಿರುವ ಜೋ ರೂಟ್ ಶೂನ್ಯಕ್ಕೆ ಔಟಾಗಿರುವುದು ಕೇವಲ ಒಂದು ಬಾರಿ ಎಂದರೆ ನಂಬಲೇಬೇಕು. ಹೀಗಾಗಿಯೇ ಈ ಬಾರಿಯ ಸರಣಿಯನ್ನು ಜೋ ರೂಟ್ vs ಟೀಮ್ ಇಂಡಿಯಾ ಬೌಲರ್ಸ್ ಎಂದು ಬಿಂಬಿಸಲಾಗುತ್ತಿದೆ. ಈ ಕದನದಲ್ಲಿ ಅಂತಿಮವಾಗಿ ಗೆಲ್ಲುವವರು ಯಾರೆಂಬುದನ್ನು ಕಾದು ನೋಡೋಣ.