
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ರಿಷಭ್ ಪಂತ್ ಪಲ್ಟಿ ಹೊಡೆದು ಸಂಭ್ರಮಿಸಿದ್ದರು. ಈ ಭರ್ಜರಿ ಸೆಲೆಬ್ರೇಷನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ನಲ್ಲೂ ಅಬ್ಬರಿಸಿದ್ದ ಪಂತ್ ಮತ್ತೊಮ್ಮೆ ಶತಕ ಬಾರಿಸಿದರು. ಆದರೆ ಈ ಬಾರಿ ಅವರು ಪಲ್ಟಿ ಹೊಡೆದು ಸಂಭ್ರಮಿಸಿರಲಿಲ್ಲ.

ಬದಲಾಗಿ ಕಣ್ಣ ಮೇಲೆ ಬೆರಳಿಟ್ಟು ವಿಭಿನ್ನ ಸಂಭ್ರಮದೊಂದಿಗೆ ಗಮನ ಸೆಳೆದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ನ ಈ ಸಂಭ್ರಮದ ಅರ್ಥವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ...

ರಿಷಭ್ ಪಂತ್ ಅವರ ಸಂಭ್ರಮದ ಹಿಂದಿರುವುದು ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೆಲೆ ಅಲಿ ಅವರ ಸೆಲೆಬ್ರೇಷನ್. ಎವರ್ಟನ್, ಟೊಟೆನ್ಹ್ಯಾಮ್ ಹಾಟ್ಸ್‌ಪರ್ ಕ್ಲಬ್ ಪರ ಕಣಕ್ಕಿಳಿದಿದ್ದ ಡೆಲೆ ಅಲಿ ಅವರು ಗೋಲು ಬಾರಿಸಿದ ಬಳಿಕ ಕಣ್ಣ ಮೇಲೆ ಬೆರಳಿಟ್ಟು ಸಂಭ್ರಮಿಸುತ್ತಿದ್ದರು. ಇದೇ ಸಂಭ್ರಮವನ್ನು ರಿಷಭ್ ಪಂತ್ ಅನುಕರಿಸಿದ್ದಾರೆ.

ಇನ್ನು ಈ ಸಂಭ್ರಮದ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದ ಡೆಲೆ ಅಲಿ ಅವರು, ಸಹ ಆಟಗಾರ ಜೇಮಿ ವರ್ಡಿ ಅವರ ಮಕ್ಕಳು ಈ ರೀತಿಯಾಗಿ ನನ್ನೊಂದಿಗೆ ಆಟವಾಡಿದ್ದರು. ಇದನ್ನೇ ನಾನು ಮೈದಾನದಲ್ಲಿ ತೋರಿಸಲಾರಂಭಿಸಿದೆ. ಅಲ್ಲದೆ ಇದಕ್ಕೆ ಯಾವುದೇ ನಿರ್ದಿಷ್ಟ ರಾಜಕೀಯ ಅಥವಾ ಸಾಮಾಜಿಕ ಅರ್ಥವಿಲ್ಲ ಎಂದಿದ್ದರು.

ಇತ್ತ ಫುಟ್ಬಾಲ್ ಪ್ರೇಮಿಯಾಗಿರುವ ರಿಷಭ್ ಪಂತ್ ಆಂಗ್ಲರ ನಾಡಿನಲ್ಲಿ ಇದೀಗ ಡೆಲೆ ಅಲಿ ಅವರ ಸಂಭ್ರಮದೊಂದಿಗೆ ಗಮನ ಸೆಳೆದಿದ್ದಾರೆ. ಈ ಮೂಲಕ ತನ್ನ ಎರಡನೇ ಶತಕವನ್ನು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಈ ಸಂಭ್ರಮ ಮುಂದಿನ ಪಂದ್ಯಗಳಲ್ಲೂ ಮುಂದುವರೆಯಲಿದೆಯಾ ಕಾದು ನೋಡಬೇಕಿದೆ.