
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾನುವಾರ ಲಕ್ನೋದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಹಣಾಹಣಿಯಲ್ಲಿ ಸ್ಮರಣೀಯ ದಾಖಲೆಯೊಂದನ್ನು ಬರೆದಿದ್ದಾರೆ.

ಆಂಗ್ಲರ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ಗೆ ನಾಯಕನಾಗಿ ಇದು 100ನೇ ಅಂತಾರಾಷ್ಟ್ರೀಯ ಪಂದ್ಯ.

ಈ ಮೂಲಕ ರೋಹಿತ್ ಶರ್ಮಾ ಅವರು 100 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಮುನ್ನಡೆಸಿದ ಏಳನೇ ಭಾರತೀಯರಾಗಿದ್ದಾರೆ.

ಹಾಗೆಯೇ 100 ಅಥವಾ 100 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುವ ಆಟಗಾರರ ಪಟ್ಟಿಯಲ್ಲಿ ಶರ್ಮಾ, ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಕಪಿಲ್ ದೇವ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರೊಂದಿಗೆ ಸೇರ್ಪಡೆಕೊಂಡಿದ್ದಾರೆ.

ಇದಲ್ಲದೆ ಇಂಗ್ಲೆಂಡ್ ವಿರುದ್ಧ ಅಜೇಯ ಅರ್ಧಶತಕ ಸಿಡಿಸಿರುವ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 18,000 ರನ್ ಪೂರೈಸುವ ಮೂಲಕ ದಾಖಲೆ ಪುಸ್ತಕ ಸೇರಿದ್ದಾರೆ.

ಇದರೊಂದಿಗೆ ರೋಹಿತ್ ಈ ಮೈಲುಗಲ್ಲು ಸಾಧಿಸಿದ ಐದನೇ ಭಾರತೀಯ ಬ್ಯಾಟರ್ ಆಗಿದ್ದಾರೆ ಎಂಬುದು ಗಮನಾರ್ಹ. ಈ ಮೂಲಕ ರೋಹಿತ್ ಈ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿಯಂತಹ ಮಾಜಿ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಈ ಸುದ್ದಿ ಬರೆಯುವ ಹೊತ್ತಿಗೆ ರೋಹಿತ್ ಶರ್ಮಾ 76 ಎಸೆತಗಳಲ್ಲಿ 67 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೋಹಿತ್ ಅವರ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹ ಸೇರಿವೆ.
Published On - 4:14 pm, Sun, 29 October 23