Updated on: Jul 27, 2023 | 9:44 AM
ಇಂದಿನಿಂದ ಅಂದರೆ, ಜುಲೈ 27 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ ಮುಖಾಮುಖಿಯಾಗುತ್ತಿವೆ. ಸರಣಿಯ ಮೊದಲ ಪಂದ್ಯ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ಶನಿವಾರ (ಜುಲೈ 29) ಎರಡನೇ ಏಕದಿನ ಪಂದ್ಯ ನಡೆಯಲಿದೆ. ಆಗಸ್ಟ್ 1 ರಂದು ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ಟ್ರಿನಿಡಾಡ್ ಆತಿಥ್ಯವಹಿಸಲಿದೆ.
ಇನ್ನು ಕೊನೆಯ ಬಾರಿಗೆ 2022ರಲ್ಲಿ ಕೆರಿಬಿಯನ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು 3-0 ರಲ್ಲಿ ಗೆದ್ದುಕೊಂಡಿತು. ಇದೀಗ ಈ ಸರಣಿಯಲ್ಲೂ ಗೆಲುವಿನ ನಾಗಲೋಟ ಮುಂದುವರೆಸಲು ಭಾರತ ಪ್ರಯತ್ನಿಸಲಿದೆ. ಹಾಗೆಯೇ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಜಡೇಜಾ ಕೂಡ ಈ ಸರಣಿಯಲ್ಲಿ ದಾಖಲೆಯನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪೈಕಿ ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಆಲ್ ರೌಂಡರ್ ರವೀಂದ್ರ ಜಡೇಜಾ, ಈ ಸರಣಿಯಲ್ಲಿ ಕೇವಲ 4 ವಿಕೆಟ್ ಉರುಳಿಸಿದರೆ ಮೊದಲ ಸ್ಥಾನಕ್ಕೇರಲಿದ್ದಾರೆ.
ವಿಂಡೀಸ್ ವಿರುದ್ಧ ಇದುವರೆಗೆ 29 ಏಕದಿನ ಪಂದ್ಯಗಳನ್ನಾಡಿರುವ ಜಡೇಜಾ ಒಟ್ಟು 41 ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ ಅತ್ಯಧಿಕ ವಿಕೆಟ್ ಉರುಳಿಸಿದವರ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ 1983 ರ ವಿಶ್ವಕಪ್ ಹೀರೋ ಕಪಿಲ್ ದೇವ್ ವಿಂಡೀಸ್ ವಿರುದ್ಧ 43 ವಿಕೆಟ್ ಉರುಳಿಸಿದ್ದಾರೆ.
ಹಾಗೆಯೇ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ವಿಂಡೀಸ್ ದಿಗ್ಗಜ ಬೌಲರ್ ಕರ್ಟ್ನಿ ವಾಲ್ಷ್, ಟೀಂ ಇಂಡಿಯಾ ವಿರುದ್ಧ 38 ಪಂದ್ಯಗಳನ್ನಾಡಿದ್ದು, ಇದರಲ್ಲಿ 44 ವಿಕೆಟ್ ಪಡೆದಿದ್ದಾರೆ.
ವಾಸ್ತವವಾಗಿ ಕಳೆದ ಪ್ರವಾಸದಲ್ಲಿಯೇ ಜಡೇಜಾಗೆ ಈ ದಾಖಲೆ ಮುರಿಯುವ ಅವಕಾಶವಿತ್ತು. ಭಾರತ ಕಳೆದ ಬಾರಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಏಕದಿನ ತಂಡದ ಉಪನಾಯಕರಾಗಿದ್ದ ಜಡೇಜಾ ಮೊಣಕಾಲಿನ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದರು. ಹೀಗಾಗಿ ಈ ದಾಖಲೆಯನ್ನು ಮುರಿಯಲು ಮತ್ತೊಂದು ವರ್ಷ ಕಾಯಬೇಕಾಯಿತು.
ಪ್ರಸ್ತುತ ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿರುವ ಟೀಂ ಇಂಡಿಯಾ ಆ ನಂತರ ಆಗಸ್ಟ್ 3, 6, 8, 12 ಮತ್ತು 13 ರಂದು ಐದು ಪಂದ್ಯಗಳ ಟಿ20 ಸರಣಿಯನ್ನು ಅಡಲಿದೆ.