
ಟೀಮ್ ಇಂಡಿಯಾ, ನ್ಯೂಝಿಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ರಾಯ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಶಹೀರ್ ವೀರ್ ನಾರಣಾಯಣ್ ಸಿಂಗ್ ಮೈದಾನದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದ್ದಂತೆ ತವರಿನಲ್ಲಿ 100 ಟಿ20 ಪಂದ್ಯಗಳನ್ನಾಡಿದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 3ನೇ ತಂಡವೆಂಬ ಹೆಗ್ಗಳಿಕೆಗೂ ಪಾತ್ರರಾದರು.

ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ ತವರಿನಲ್ಲಿ 100 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ನ್ಯೂಝಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ಹೆಸರಿನಲ್ಲಿ ಮಾತ್ರ ಇತ್ತು. ನ್ಯೂಝಿಲೆಂಡ್ ತಂಡವು ತವರಿನಲ್ಲಿ ಒಟ್ಟು 113 ಟಿ20 ಪಂದ್ಯಗಳನ್ನಾಡಿದೆ. ಹಾಗೆಯೇ ವೆಸ್ಟ್ ಇಂಡೀಸ್ ತವರಿನಲ್ಲಿ 108 ಪಂದ್ಯಗಳನ್ನಾಡಿದ ದಾಖಲೆ ಹೊಂದಿದೆ.

ಇದೀಗ ಭಾರತ ತಂಡವು ಈ ಪಟ್ಟಿಗೆ ಸೇರ್ಪಡೆಯಾಗಿದೆ. ಟೀಮ್ ಇಂಡಿಯಾ ಈವರೆಗೆ 265 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತದಲ್ಲಿ ಆಡಿದ ಪಂದ್ಯಗಳ ಸಂಖ್ಯೆ 100. ಈ ಮೂಲಕ ತವರು ಮೈದಾನದಲ್ಲಿ 100 ಟಿ20 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಪಟ್ಟಿಗೆ ಟೀಮ್ ಇಂಡಿಯಾ ಸೇರ್ಪಡೆಯಾಗಿದೆ.

ಇನ್ನು ಭಾರತ ತಂಡವು ಈವರೆಗೆ ಆಡಿದ 265 ಟಿ20 ಪಂದ್ಯಗಳಲ್ಲಿ 183 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು ಸೋತಿರುವುದು ಕೇವಲ 73 ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ ಪಂದ್ಯಗಳಲ್ಲಿ 7 ಮ್ಯಾಚ್ಗಳು ಟೈ ಆಗಿದೆ. ಹಾಗೆಯೇ 6 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದ್ದವು. ಅಂದರೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡವೆಂಬ ವಿಶ್ವ ದಾಖಲೆ ಕೂಡ ಟೀಮ್ ಇಂಡಿಯಾ ಹೆಸರಿನಲ್ಲಿದೆ.