Updated on: Jun 30, 2023 | 10:31 AM
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೆ ಇನ್ನು 107 ದಿನಗಳು ಬಾಕಿ ಉಳಿದಿವೆ. ಎರಡೂ ತಂಡಗಳು ಅಹಮದಾಬಾದ್ ಮೈದಾನದಲ್ಲಿ ಅಕ್ಟೋಬರ್ 15 ರಂದು ಮುಖಾಮುಖಿಯಾಗಲಿವೆ. ಆದರೆ ಅದಕ್ಕೂ ಮುನ್ನ ಈ ಎರಡೂ ತಂಡಗಳ ಆಟಗಾರರಿಗೆ ಹೆಚ್ಚಿನ ಹಣ ನೀಡಬೇಕೆಂದು ಮಾಜಿ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಬೇಡಿಕೆ ಇಟ್ಟಿದ್ದಾರೆ.
ವಾಸ್ತವವಾಗಿ ಇಡೀ ವಿಶ್ವ ಕ್ರಿಕೆಟ್ ಈ ಪಂದ್ಯವನ್ನು ಎದುರು ನೋಡುತ್ತಿದೆ. ಏಕೆಂದರೆ ಈ ಉಭಯ ತಂಡಗಳು ಭಾರತ- ಪಾಕ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಕೇವಲ ಐಸಿಸಿ ಈವೆಂಟ್ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಅಪರೂಪಕ್ಕೊಮ್ಮೆ ಕಾಳಗಕ್ಕಿಳಿಯುವ ಈ ತಂಡಗಳ ನಡುವಿನ ಹೋರಾಟ ಬಲು ರೋಚಕವೂ ಕೂಡ.
ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ವಿಶ್ವದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅಹಮದಾಬಾದ್ಗೆ ಬಂದಿಳಿಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಹೋಟೆಲ್ಗಳು ಈಗಾಗಲೇ ತಮ್ಮ ರೂಮ್ಗಳ ಬೆಲೆಯನ್ನು 10 ಪಟ್ಟು ಹೆಚ್ಚಿಸಿವೆ.
ಹಾಗೆಯೇ ಈ ಎರಡೂ ತಂಡಗಳ ಮುಖಾಮುಖಿಯನ್ನು ಮೈದಾನದಲ್ಲಿ ವೀಕ್ಷಿಸಲು ಸಾಧ್ಯವಾಗದ ಜನ ಟಿವಿಯಲ್ಲಿ ವೀಕ್ಷಿಸುತ್ತಾರೆ. ಹೀಗಿರುವಾಗ ಈ ಪಂದ್ಯ ಪ್ರಸಾರಕರಿಗೆ ಭಾರಿ ಮೊತ್ತದ ಲಾಭವಾಗುವುದಂತೂ ಖಚಿತ. ಹೀಗಾಗಿ ಭಾರತ-ಪಾಕಿಸ್ತಾನ ತಂಡಗಳ ಆಟಗಾರರಿಗೆ ಐಸಿಸಿ ನಿಗದಿಗಿಂತ ಹೆಚ್ಚು ಹಣ ನೀಡಬೇಕೆಂದು ಗೇಲ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ವೆಸ್ಟ್ ಇಂಡೀಸ್ ತಂಡ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ವಿಶ್ವಕಪ್ ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುವುದರಿಂದ ಐಸಿಸಿಗೆ ಹಾಗೂ ಪ್ರಸಾರಕರಿಗೆ ಸಾಕಷ್ಟು ಆದಾಯ ಬರುತ್ತದೆ. ಈ ಎರಡೂ ತಂಡಗಳ ಮುಖಾಮುಖಿಯೇ ವಿಶ್ವಕಪ್ನ ಪ್ರಮುಖ ಕೇಂದ್ರ ಬಿಂದುವಾಗಿದೆ.
ಹಾಗೆಯೇ ಈ ಎರಡೂ ತಂಡಗಳ ನಡುವಿನ ಪಂದ್ಯ ಸಂಪೂರ್ಣ ಈವೆಂಟ್ ಅನ್ನು ನಿಭಾಯಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಮತ್ತು ಭಾರತದ ಆಟಗಾರರು ಈ ಪಂದ್ಯದಲ್ಲಿ ಆಡಲು ಹೆಚ್ಚಿನ ಹಣಕ್ಕೆ ಬೇಡಿಕೆಯಿಡಬೇಕು ಎಂದಿದ್ದಾರೆ.
ತಾನು ಕ್ರಿಕೆಟ್ ಮಂಡಳಿ ಅಥವಾ ಐಸಿಸಿಯ ಅಧಿಕಾರದಲ್ಲಿದ್ದರೆ, ಈ ಹೈಪ್ರೊಫೈಲ್ ಪಂದ್ಯವನ್ನು ಆಡುವ ಆಟಗಾರರಿಗೆ ಹೆಚ್ಚಿನ ಹಣ ನೀಡುವಂತೆ ಪ್ರತಿಪಾದಿಸುತ್ತಿದ್ದೆ ಎಂದು ಗೇಲ್ ತಮಾಷೆಯಾಗಿ ಹೇಳಿದ್ದಾರೆ. ಇದಲ್ಲದೆ ಪಿಟಿಐ ಜೊತೆ ಮಾತನಾಡಿದ ಗೇಲ್, ಈ ಟೂರ್ನಿಯ ಸೆಮಿಫೈನಲ್ ಆಡುವ 4 ತಂಡಗಳನ್ನು ಹೆಸರಿಸಿದ್ದು, ಗೇಲ್ ಪ್ರಕಾರ ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವುದು ಖಚಿತ ಎಂದಿದ್ದಾರೆ.