
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜಯಿಸಿ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ (India vs South Africa) ಪ್ರವಾಸ ಬೆಳೆಸಿದೆ. ಇಲ್ಲಿ ಮೂರು ಪಂದ್ಯಗಳ ಟೆಸ್ಟ್ ಮತ್ತು ಏಕದಿನ ಸರಣಿ ಆಡಲಿದ್ದು, ಡಿಸೆಂಬರ್ 26 ರಿಂದ ಸೆಂಚೂರಿಯನ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.

ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಫೈವ್ಸ್ಟಾರ್ ಹೊಟೇಲ್ನಲ್ಲಿ ಮೂರು ದಿನಗಳ ಕ್ವಾರಂಟೈನ್ ವ್ಯವಸ್ಥೆಯಲ್ಲಿದ್ದ ಟೀಮ್ ಇಂಡಿಯಾ ಆಟಗಾರರು ಇಂದು ಮುಂಜಾನೆ ಚಾರ್ಟರ್ ವಿಮಾನವೊಂದರಲ್ಲಿ ಜೊಹಾನ್ಸ್ಬರ್ಗ್ಗೆ ತೆರಳಿದ್ದಾರೆ. ಈ ಬಗ್ಗೆ ಬಿಸಿಸಿಐ ಫೋಟೋವೊಂದನ್ನು ಹಂಚಿಕೊಂಡಿದೆ.

ಆಫ್ರಿಕಾನ್ನರ ನಾಡಿನಲ್ಲಿ ಒಮಿಕ್ರೋನ್ ವೈರಸ್ ತಾಂಡವವಾಡುತ್ತಿದ್ದು, ಇದರ ನಡುವೆ ಭಾರತ ಹರಿಣಗಳ ನಾಡಿಗೆ ಪ್ರವಾಸ ಬೆಳೆಸಿದೆ. ಹಾಗಂತ ಕ್ರಿಕೆಟ್ ಸೌತ್ ಆಫ್ರಿಕಾ ಸುಮ್ಮನೆ ಕೂತಿಲ್ಲ. ಪ್ರವಾಸಿ ಟೀಮ್ ಇಂಡಿಯಾ ಆಟಗಾರರಿಗೆ ಆಫ್ರಿಕಾ ಭರ್ಜರಿ ವ್ಯವಸ್ಥೆಯನ್ನೇ ಮಾಡಿದೆ. ವಿರಾಟ್ ಕೊಹ್ಲಿ ಪಡೆಗಾಗಿ ಸೆಂಚೂರಿಯನ್ನಲ್ಲಿರುವ ಇಡೀ ಹೊಟೇಲ್ ಅನ್ನೇ ಕ್ರಿಕೆಟ್ ಸೌತ್ ಆಫ್ರಿಕಾ ಬುಕ್ ಮಾಡಿದೆ.

ಸೆಂಚೂರಿಯನ್ನಲ್ಲಿರುವ ಇರೇನಾ ಕಂಟ್ರಿ ಲಾಡ್ಜ್ ಅನ್ನು ಭಾರತೀಯ ಆಟಗಾರರಿಗಾಗಿ ಉಳಿದುಕೊಳ್ಳು ತಯಾರಿ ಮಾಡಿದೆಯಂತೆ. ವಿಶೇಷ ಎಂದರೆ ಈ ಹೊಟೇಲ್ ಅದಾಗಲೇ ಬಯೋ ಬಬಲ್ನಿಂದ ಕೂಡಿದೆಯಂತೆ. ಯಾವುದೇ ಹೊರ ಅತಿಥಿಗಳಿಗೆ ಈ ಹೊಟೇಲ್ ಒಳಗಡೆ ಪ್ರವೇಶವಿಲ್ಲ.

ಸೌತ್ ಆಫ್ರಿಕಾದ ಸೆಂಚೂರಿಯನ್, ಜೋಹಾನ್ಸ್ಬರ್ಗ್, ಕೇಪ್ಟೌನ್ ಮತ್ತು ಪಾರ್ಲ್ ನಗರಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳ ಪಂದ್ಯಗಳು ನಡೆಯಲಿವೆ.

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಮ್ ಇಂಡಿಯಾದ ಟೆಸ್ಟ್ ಉಪನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಅಭ್ಯಾಸದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದು, ಈ ಕಾರಣದಿಂದಾಗಿ ಅವರು ಮೂರು ಟೆಸ್ಟ್ಗಳ ಸರಣಿಯನ್ನು ಆಡಲು ಸಾಧ್ಯವಾಗುವುದಿಲ್ಲ. ಇವರ ಬದಲಿಗೆ ಪ್ರಿಯಾಂಕ್ ಪಾಂಚಾಲ್ ಸ್ಥಾನ ಪಡೆದಿದ್ದಾರೆ.

ಭಾರತ “ಎ’ ತಂಡದೊಂದಿಗೆ ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಹೋಗಿರುವ, ಸೀನಿಯರ್ ತಂಡದ ಭಾಗವಾಗಿರುವವರೆಲ್ಲ ಅಲ್ಲಿಯೇ ಉಳಿದುಕೊಂಡು ತಂಡವನ್ನು ಸೇರಿಕೊಳ್ಳಲಿದ್ದಾರೆ.