
ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯಕ್ಕಾಗಿ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 17 ರಿಂದ ಶುರುವಾಗಲಿರುವ ಈ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಅವರ ಭವಿಷ್ಯ ಕೂಡ ನಿರ್ಧಾರವಾಗಲಿದೆ.

ಕಳೆದ ಕೆಲ ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಇನ್ಫಾರ್ಮ ಆಟಗಾರ ಶುಭ್ಮನ್ ಗಿಲ್ ಅವರನ್ನು ಹೊರಗಿಟ್ಟು ಕೆಎಲ್ ರಾಹುಲ್ ಅವರಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು.

ಆದರೆ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಕೇವಲ 20 ರನ್ಗಳಿಸಿ ನಿರಾಸೆ ಮೂಡಿಸಿದ್ದರು. ಇದರ ಬೆನ್ನಲ್ಲೇ 2ನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಅವರನ್ನು ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಇದಾಗ್ಯೂ ಮತ್ತೊಂದು ಅವಕಾಶ ನೀಡಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ದ್ರಾವಿಡ್ ಬಯಸಿದ್ದಾರೆ ಎಂದು ತಿಳಿದು ಬಂದಿದೆ.

ಅಂದರೆ ದೆಹಲಿ ಟೆಸ್ಟ್ನಲ್ಲಿ ಕೆಎಲ್ ರಾಹುಲ್ಗೆ ಕೊನೆಯ ಅವಕಾಶ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಒಂದು ವೇಳೆ ಅವರು ಈ ಬಾರಿ ಕೂಡ ವಿಫಲರಾದರೆ ಮುಂದಿನ 2 ಟೆಸ್ಟ್ ಪಂದ್ಯಗಳಲ್ಲಿ ಶುಭ್ಮನ್ ಗಿಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ದೆಹಲಿ ಟೆಸ್ಟ್ ಪಂದ್ಯಗಳ ಬಳಿಕ 3ನೇ ಹಾಗೂ 4ನೇ ಟೆಸ್ಟ್ ಪಂದ್ಯಗಳಿಗಾಗಿ ಟೀಮ್ ಇಂಡಿಯಾವನ್ನು ಘೋಷಣೆ ಮಾಡಲಿದೆ. ಹೀಗಾಗಿ ದೆಹಲಿ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ವಿಫಲರಾದರೆ ತಂಡದಿಂದಲೇ ಹೊರಬೀಳಬಹುದು.

ಏಕೆಂದರೆ ಕಳೆದ 8 ಟೆಸ್ಟ್ ಇನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟ್ನಿಂದ ಮೂಡಿಬಂದಂತಹ ಗರಿಷ್ಠ ಸ್ಕೋರ್ 23 ಮಾತ್ರ. ಹೀಗಾಗಿಯೇ ದೆಹಲಿ ಟೆಸ್ಟ್ ಪಂದ್ಯವು ಕನ್ನಡಿಗನಿಗೆ ಅಗ್ನಿಪರೀಕ್ಷೆಯಾಗಿರಲಿದೆ.

ಈ ಪಂದ್ಯದಲ್ಲಿ ಮಿಂಚಿದರೆ ತಂಡದಲ್ಲಿ ಮುಂದುವರೆಯಲಿದ್ದಾರೆ. ವಿಫಲರಾದರೆ ತಂಡದಿಂದ ಹೊರಬೀಳುವುದು ಖಚಿತ ಎಂದೇ ಹೇಳಬಹುದು.

ಭಾರತ ಟೆಸ್ಟ್ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್.