
ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಟೀಂ ಇಂಡಿಯಾ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆದುಕೊಂಡಿದೆ. ಆಸ್ಟ್ರೇಲಿಯಾ ನೀಡಿದ 339 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ವನಿತಾ ಪಡೆ ಕೇವಲ 5 ವಿಕೆಟ್ ಕಳೆದುಕೊಂಡು 49ನೇ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸಹ ನಿರ್ಮಿಸಿದೆ.

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸ ತಂಡವೊಂದು ವಿಶ್ವಕಪ್ ಎತ್ತಿಹಿಡಿಯಲಿದೆ. ಇಲ್ಲಿಯವರೆಗೆ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಈ ಪಂದ್ಯಾವಳಿಯನ್ನು ಗೆದ್ದಿವೆ. ಈಗ, ಮೊದಲ ಬಾರಿಗೆ, ವಿಶ್ವಕಪ್ ಗೆಲ್ಲದ ಎರಡು ತಂಡಗಳು ಫೈನಲ್ ತಲುಪಿವೆ. ಫೈನಲ್ ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯ ನವೆಂಬರ್ 2 ರಂದು ನಡೆಯಲಿದೆ.

ಪುರುಷರ ಅಥವಾ ಮಹಿಳೆಯರ ಏಕದಿನ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ತಂಡವೊಂದು 300 ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. 2015 ರ ಪುರುಷರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ 298 ರನ್ ಬಾರಿಸಿದ್ದು ಇಲ್ಲಿಯವರೆಗಿನ ಗರಿಷ್ಠ ಸ್ಕೋರ್ ಆಗಿತ್ತು.

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 339 ರನ್‌ಗಳ ಗುರಿ ಬೆನ್ನಟ್ಟಿದ ಮೊದಲ ತಂಡ ಎಂಬ ದಾಖಲೆ ಭಾರತದ ಪಾಲಾಗಿದೆ. ಇದಕ್ಕೂ ಮೊದಲು, ಇದೇ ಟೂರ್ನಿಯ ಗುಂಪು ಹಂತದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಈ ದಾಖಲೆ ಬರೆದಿತ್ತು. ಭಾರತ ನೀಡಿದ 331 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ಬೆನ್ನಟ್ಟಿತ್ತು. ಈಗ ಭಾರತ ಈ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು, 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 265 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಮೊತ್ತವಾಗಿದೆ. ದೆಹಲಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಈ ಹಿಂದೆ 781 ರನ್ ಗಳಿಸಿದ್ದು ಇದರ ಹಿಂದಿನ ಅತ್ಯಧಿಕ ಮೊತ್ತವಾಗಿತ್ತು. ಈಗ, ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ಒಟ್ಟಾಗಿ 679 ರನ್ ಗಳಿಸಿವೆ.

ಹಾಗೆಯೇ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತ ದಾಖಲಿಸಿದ ಎರಡನೇ ಅತ್ಯಧಿಕ ಮೊತ್ತ ಇದಾಗಿದೆ. ಇದಕ್ಕೂ ಮುನ್ನ ಕಳೆದ ತಿಂಗಳು ದೆಹಲಿಯಲ್ಲಿ ಇದೇ ತಂಡದ ವಿರುದ್ಧ ಭಾರತ 369 ರನ್ ಗಳಿಸಿತ್ತು. ಇದರ ಜೊತೆಗೆ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಮೂರನೇ ಬಾರಿಗೆ ಭಾರತ ಫೈನಲ್‌ಗೆ ಪ್ರವೇಶಿಸಿದೆ. ಈ ಹಿಂದೆ 2005 ಮತ್ತು 2017 ರಲ್ಲಿ ಭಾರತ ಫೈನಲ್ ತಲುಪಿತ್ತಾದರೂ ಎರಡೂ ಬಾರಿಯೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.