
ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆದಿತ್ತು. ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದಿದ್ದ ಈ ಟೆಸ್ಟ್ ಸರಣಿ ಅಂತಿಮವಾಗಿ 2-2 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಇದೀಗ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಐದು ಪಂದ್ಯಗಳ ಪಿಚ್ ಮತ್ತು ಔಟ್‌ಫೀಲ್ಡ್ ರೇಟಿಂಗ್ ಅನ್ನು ಐಸಿಸಿ ಬಿಡುಗಡೆ ಮಾಡಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಲೀಡ್ಸ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದ ಕೊನೆಯ ದಿನದಂದು ಇಂಗ್ಲೆಂಡ್ 5 ವಿಕೆಟ್‌ಗಳಿಂದ ಜಯಗಳಿಸಿತು. ಭಾರತ ನೀಡಿದ 371 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಸುಲಭವಾಗಿ ಬೆನ್ನಟ್ಟಿತು. ಈಗ ಐಸಿಸಿ ಲೀಡ್ಸ್ ಪಿಚ್ ಮತ್ತು ಔಟ್‌ಫೀಲ್ಡ್ ಎರಡಕ್ಕೂ ಅತ್ಯುತ್ತಮ ರೇಟಿಂಗ್ ನೀಡಿದೆ.

ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಿತು . ಈ ಪಂದ್ಯವನ್ನು ಟೀಮ್ ಇಂಡಿಯಾ 336 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದ ಪಿಚ್‌ಗೆ ಐಸಿಸಿ ಉತ್ತಮ ರೇಟಿಂಗ್ ನೀಡಿದೆ . ಔಟ್‌ಫೀಲ್ಡ್ ಅತ್ಯಧಿಕ ರೇಟಿಂಗ್ ಪಡೆದಿದೆ.

ಆ ಬಳಿಕ ಉಭಯ ತಂಡಗಳ ನಡುವೆ ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಕೂಡ ಐದು ದಿನ ನಡೆಯಿತ್ತಾದರೂ ಈ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೀಗ ಐಸಿಸಿ ಲಾರ್ಡ್ಸ್ ಪಿಚ್‌ಗೆ ತೃಪ್ತಿಕರ ಎಂದು ರೇಟಿಂಗ್ ನೀಡಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯಿತು. ಈ ಪಂದ್ಯದಲ್ಲೂ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತಾದರೂ, ಹೋರಾಟ ಬಿಡದ ಟೀಂ ಇಂಡಿಯಾ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಯಿತು. ಇದೀಗ ಐಸಿಸಿ ಈ ಪಿಚ್‌ಗೆ ತೃಪ್ತಿಕರ ಎಂದು ರೇಟಿಂಗ್ ನೀಡಿದೆ.

ಓವಲ್ ಮೈದಾನದ ಪಿಚ್ ಹಸಿರಿನಿಂದ ಕೂಡಿತ್ತು. ಇದರಿಂದಾಗಿ ಬೌಲರ್‌ಗಳು ಮೊದಲ 2 ದಿನಗಳಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ, ಇದರ ಹೊರತಾಗಿಯೂ, ಪಂದ್ಯವನ್ನು 5 ನೇ ದಿನದವರೆಗೆ ಆಡಲಾಯಿತು. ಕೊನೆಯಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಬೌಲಿಂಗ್ ಟೀಮ್ ಇಂಡಿಯಾಕ್ಕೆ 6 ರನ್‌ಗಳ ಗೆಲುವು ತಂದುಕೊಟ್ಟಿತು. ಈ ಪಿಚ್‌ಗೆ ಐಸಿಸಿ ಅತ್ಯುತ್ತಮ ಎಂದು ರೇಟಿಂಗ್ ನೀಡಿದೆ.