
ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ಗೆ (Shubman Gill) ದಂಡದ ಭೀತಿ ಎದುರಾಗಿದೆ. ಅದು ಕೂಡ ಸಾಕ್ಸ್ ಬದಲಿಸಿದಕ್ಕೆ ಎಂಬುದೇ ಅಚ್ಚರಿ. ಅಂದರೆ ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಶುಭ್ಮನ್ ಗಿಲ್ ಬಿಳಿ ಸಾಕ್ಸ್ ಧರಿಸಲು ಮರೆತಿದ್ದಾರೆ. ಇದಕ್ಕಾಗಿ ಈಗ ಅವರು ದಂಡ ಕಟ್ಟಬೇಕಾಗಿ ಬರಬಹುದು.

ಐಸಿಸಿ, ನಿಯಮದ ಪ್ರಕಾರ ಟೆಸ್ಟ್ ಪಂದ್ಯಗಳನ್ನಾಡುವಾಗ ಬಿಳಿ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್ ಧರಿಸುವುದು ಕಡ್ಡಾಯ. ಈ ನಿಯಮವನ್ನು 2023 ರಲ್ಲಿ ಜಾರಿಗೊಳಿಸಲಾಗಿದೆ. ಆದರೆ ಈ ನಿಯಮ ಗೊತ್ತಿಲ್ಲದೆ ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧ ಕಪ್ಪು ಬಣ್ಣದ ಸಾಕ್ಸ್ ಧರಿಸಿ ಕಣಕ್ಕಿಳಿದಿದ್ದಾರೆ.

ಇಲ್ಲಿ ಶುಭ್ಮನ್ ಗಿಲ್ ಧರಿಸಿರುವ ಸಾಕ್ಸ್ ಬಣ್ಣ ಬಹಿರಂಗವಾಗಿರುವುದು ಕೂಡ ಅವರು ಮಾಡಿದ ಎಡವಟ್ಟಿನಿಂದ ಎಂಬುದು ವಿಶೇಷ. ಪಂದ್ಯದ ನಡುವೆ ಪ್ಯಾಡ್ ಸರಿ ಮಾಡಿದಾಗ ಶುಭ್ಮನ್ ಗಿಲ್ ಅವರ ಪ್ಯಾಂಟ್ ಮೇಲೇಕ್ಕೇರಿದ್ದು, ಇದರಿಂದ ಅವರು ಕಪ್ಪು ಬಣ್ಣದ ಸಾಕ್ಸ್ ಧರಿಸಿರುವುದು ಕಾಣಿಸಿಕೊಂಡಿದೆ.

ಈ ಬಗ್ಗೆ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಶುಭ್ಮನ್ ಗಿಲ್ ಅವರನ್ನು ವಿಚಾರಿಸಲಿದ್ದು, ಈ ವೇಳೆ ಡ್ರೆಸ್ ಕೋಡ್ ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ಗಿಲ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಉದ್ದೇಶಪೂರ್ವಕ ಹಂತ 1 ಅಪರಾಧವೆಂದು ಪರಿಗಣಿಸಿ ಶುಭ್ಮನ್ ಗಿಲ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಿಂದ 20 ರಷ್ಟು ದಂಡ ವಿಧಿಸಬಹುದು.

ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಗಿಲ್ 175 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ ಅಜೇಯ 127 ರನ್ ಕಲೆಹಾಕಿದ್ದಾರೆ. ಶುಭ್ಮನ್ ಗಿಲ್ (127) ಹಾಗೂ ಯಶಸ್ವಿ ಜೈಸ್ವಾಲ್ (101) ಅವರ ಶತಕಗಳ ನೆರವಿನಿಂದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ. ಇನ್ನು ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ಗೆ ಬರಲಿಯುವ ಗಿಲ್ ತಪ್ಪು ತಿದ್ದಿಕೊಂಡು ತನ್ನ ಕಪ್ಪು ಸಾಕ್ಸ್ ಅನ್ನು ಬದಲಿಸಲಿದ್ದಾರಾ ಕಾದು ನೋಡಬೇಕಿದೆ.