
2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಪಂದ್ಯವನ್ನಾಡುತ್ತವೆ ಎಂದರೆ ಒಂದಿಲ್ಲೊಂದು ವಿವಾದಗಳು ಸೃಷ್ಟಿಯಾಗುವುದಂತೂ ಖಚಿತ. ಅದರಲ್ಲೂ ಏಷ್ಯಾಕಪ್ ಇತಿಹಾಸದಲ್ಲಿ ಉಭಯ ತಂಡಗಳ ಆಟಗಾರರು ಸಾಕಷ್ಟು ಬಾರಿ ವಿವಾದ ಮಾಡಿಕೊಂಡಿದ್ದಾರೆ. ಅವರಲ್ಲಿ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಶೋಯೆಬ್ ಅಖ್ತರ್, ಕಮ್ರಾನ್ ಅಕ್ಮಲ್ ಮತ್ತು ಆಸಿಫ್ ಅಲಿ ಸೇರಿದ್ದಾರೆ. ಆಟಗಾರರಲ್ಲದೆ, ಉಭಯ ತಂಡಗಳು ಕೂಡ ಏಷ್ಯಾಕಪ್ ಬಹಿಷ್ಕರಿಸಿ ವಿವಾದವನ್ನು ಹುಟ್ಟಿಹಾಕಿವೆ.

1986 ರ ಏಷ್ಯಾಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸುವ ಮೂಲಕ ಭಾರತ ಎಲ್ಲರಿಗೂ ಆಘಾತ ನೀಡಿತು. ಶ್ರೀಲಂಕಾದಲ್ಲಿನ ಆಂತರಿಕ ಕಲಹದಿಂದ ಉಂಟಾದ ಉದ್ವಿಗ್ನತೆಯಿಂದಾಗಿ ತನ್ನ ತಂಡವನ್ನು ಏಷ್ಯಾಕಪ್‌ಗೆ ಕಳುಹಿಸದಿರಲು ನಿರ್ಧರಿಸಿತ್ತು. ಅದೇ ರೀತಿ, 1990 ರ ಏಷ್ಯಾಕಪ್‌ಗಾಗಿ ಪಾಕಿಸ್ತಾನ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿತ್ತು. ಭಾರತದೊಂದಿಗಿನ ರಾಜಕೀಯ ಸಂಬಂಧಗಳು ಹದಗೆಟ್ಟ ಕಾರಣ ಪಾಕಿಸ್ತಾನ ಈ ಕ್ರಮ ಕೈಗೊಂಡಿತ್ತು.

ಎರಡೂ ದೇಶಗಳಲ್ಲದೆ, ಉಭಯ ತಂಡಗಳ ಆಟಗಾರರು ಸಹ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 2010 ರ ಏಷ್ಯಾಕಪ್‌ನಲ್ಲಿ, ಹರ್ಭಜನ್ ಸಿಂಗ್ ಮತ್ತು ಶೋಯೆಬ್ ಅಖ್ತರ್ ನಡುವೆ ಜಗಳವಾಗಿತ್ತು. ಮೈದಾನದಲ್ಲಿ ಮಾತ್ರವಲ್ಲದೆ ಹೋಟೆಲ್ ರೂಮ್ನಲ್ಲೂ ಇವರಿಬ್ಬರು ಜಗಳ ಮಾಡಿಕೊಂಡಿದ್ದರು.

2010 ರ ಏಷ್ಯಾಕಪ್ ಸಮಯದಲ್ಲಿ ಗೌತಮ್ ಗಂಭೀರ್ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಜೊತೆ ಮೈದಾನದಲ್ಲೇ ಜಗಳ ಮಾಡಿದ್ದರು. ಪಾನೀಯ ವಿರಾಮದ ಸಮಯದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ವಿಷಯ ಎಷ್ಟು ಬಿಸಿಯಾಗಿತ್ತೆಂದರೆ ಅಂಪೈರ್ ಮಧ್ಯಪ್ರವೇಶಿಸಬೇಕಾಯಿತು.

2022 ರ ಏಷ್ಯಾಕಪ್ ಸಮಯದಲ್ಲಿ, ಪಾಕಿಸ್ತಾನಿ ಕ್ರಿಕೆಟಿಗ ಆಸಿಫ್ ಅಲಿ ಅಫ್ಘಾನಿಸ್ತಾನದ ಫರೀದ್ ಅಹ್ಮದ್ ಜೊತೆ ಜಗಳವಾಡಿ ವಿವಾದಕ್ಕೆ ಸಿಲುಕಿದ್ದರು. ಆಸಿಫ್ ಅಲಿಯನ್ನು ಔಟ್ ಮಾಡಿದ ನಂತರ, ಫರೀದ್ ಸಂಭ್ರಮಿಸುತ್ತಿದ್ದಾಗ, ಇಬ್ಬರ ನಡುವೆ ಗಲಾಟೆ ನಡೆಯಿತು. ನಂತರ, ಇಬ್ಬರ ಪಂದ್ಯ ಶುಲ್ಕವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲಾಯಿತು.