
T20 World Cup 2024: ನ್ಯೂಯಾರ್ಕ್ನಲ್ಲಿ ನಡೆದ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಪಾಕಿಸ್ತಾನ್ (Pakistan) ವಿರುದ್ಧ ಟೀಮ್ ಇಂಡಿಯಾ (Team India) 6 ರನ್ಗಳ ರೋಚಕ ಜಯ ಸಾಧಿಸಿತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸೋಲುತ್ತಿದ್ದಂತೆ ಪಾಕ್ ಆಟಗಾರ ನಸೀಮ್ ಶಾ ಕಣ್ಣೀರು ಹಾಕಿದರು.

9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಸೀಮ್ ಶಾ ಅಂತಿಮ ಓವರ್ ವೇಳೆ ದಿಟ್ಟ ಹೋರಾಟ ಪ್ರದರ್ಶಿಸಿದ್ದರು. 4 ಎಸೆತಗಳನ್ನು ಎದುರಿಸಿದ್ದ ನಸೀಮ್ 2 ಫೋರ್ಗಳೊಂದಿಗೆ 10 ರನ್ ಬಾರಿಸಿದ್ದರು. ಇದಾಗ್ಯೂ ಪಾಕ್ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಿರಲಿಲ್ಲ.

ಅತ್ತ ಟೀಮ್ ಇಂಡಿಯಾ 6 ರನ್ಗಳಿಂದ ರೋಚಕ ಜಯ ಸಾಧಿಸುತ್ತಿದ್ದಂತೆ, ಇತ್ತ ದುಃಖತಪ್ತನಾದ ನಸೀಮ್ ಶಾ ಅಳಲಾರಂಭಿಸಿದರು. ಈ ವೇಳೆ ಸಹ ಆಟಗಾರ ಶಾಹೀನ್ ಅಫ್ರಿದಿ ಸಮಾಧಾನಪಡಿಸಲು ಯತ್ನಿಸಿದರು.

ಇನ್ನು ಶೇಕ್ ಹ್ಯಾಂಡ್ ನೀಡುವ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಪಾಕ್ ತಂಡದ ಯುವ ವೇಗಿಯನ್ನು ಸಮಾಧಾನ ಪಡಿಸುತ್ತಿರುವುದು ಕಂಡು ಬಂತು.

ಇದೀಗ ಈ ಭಾವುಕ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಯುವ ಆಟಗಾರನ ಪ್ರದರ್ಶನಕ್ಕೆ ಪಾಕ್ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ALL PC: ICC/GettyImages)