ಕೋವಿಡ್ ಕಾರಣದಿಂದ ಅರ್ಧದಲ್ಲಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಿನ ಭಾಗ ಯುಎಇ ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಪುನರಾರಂಭವಾಗಲಿದ್ದು, ಸಿದ್ದತೆಗಳು ನಡೆಯುತ್ತಿದೆ. ಇದರ ಸಲುವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಆಟಗಾರರು ದುಬೈಗೆ ತೆರಳಿದ್ದಾರೆ.
ಶುಕ್ರವಾರ ( ಆಗಸ್ಟ್ 13 ) ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಗೆ ಪ್ರಯಾಣ ಬೆಳೆಸಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್ ಮೊದಲಾದವರು ಚೆನ್ನೈನಿಂದ ದುಬೈ ವಿಮಾನ ಏರಿದ್ದಾರೆ. ಉಳಿದ ಆಟಗಾರರು ನಂತರದ ದಿನಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈ ತಲುಪಿದ ನಂತರ 7 ದಿನಗಳ ಕಾಲ ವ್ಯವಸ್ಥಿತ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕಾಗಿದೆ. ತದನಂತರ ತಂಡದ ಇತರೆ ಆಟಗಾರರ ಜೊತೆಗೂಡಿ ಈ ಆಟಗಾರರು ಅಭ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ.
ಏಪ್ರಿಲ್ ನಲ್ಲಿ ನಡೆದಿದ್ದ ಐಪಿಎಲ್ ಕೂಟ ಕೋವಿಡ್ ಕಾರಣದಿಂದ ಅರ್ಧದಲ್ಲಿಯೇ ಸ್ಥಗಿತ ಮಾಡಲಾಗಿತ್ತು. ಇದೀಗ ಕೂಟವನ್ನು ಯುಎಇ ಗೆ ಸ್ಥಳಾಂತರಿಸಲಾಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿದೆ.
ಇನ್ನೂ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್ಗಾಗಿ ಯುಎಇಗೆ ತೆರಳಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ಖಡಕ್ ಆಗಿ ಸೂಚಿಸಿದೆ.
ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದಾಗಿ ಅರ್ಧದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡ