ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಸೀಸನ್ಗಾಗಿ ಬರದ ಸಿದ್ದತೆ ಆರಂಭವಾಗಿದೆ. ಈಗಾಗಲೇ ಕೆಲವು ತಂಡಗಳು ಅಭ್ಯಾಸ ಆರಂಭಿಸಿವೆ. ಆದರೆ ಈ ನಡುವೆ ಕೆಲವು ತಂಡದಲ್ಲಿ ಆಟಗಾರರ ಇಂಜುರಿ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಟಗಾರರ ಇಂಜುರಿಯಿಂದ ಬಳಲುತ್ತಿರುವ ತಂಡಗಳಲ್ಲಿ ಸಿಎಸ್ಕೆ ಕೂಡ ಒಂದಾಗಿದ್ದು, ತಂಡದ ಸ್ಟಾರ್ ವೇಗಿ ಕೈಲ್ ಜೇಮಿಸನ್ ಈಗಾಗಲೇ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಈ ನಡುವೆ ಇಂಗ್ಲೆಂಡ್ ಸ್ಫೋಟಕ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಐಪಿಎಲ್ನಿಂದ ಹೊರಬಿಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಇದಕ್ಕೆಲ್ಲ ಸ್ವತಃ ಸ್ಟೋಕ್ಸ್ ಅವರೇ ವಿವರಣೆ ನೀಡಿದ್ದಾರೆ.
ವಾಸ್ತವವಾಗಿ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಈ ಕಾರಣಕ್ಕಾಗಿ ಅವರು ಕೇವಲ ಎರಡು ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು. ಹೀಗಾಗಿ ಸ್ಟೋಕ್ಸ್ ಐಪಿಎಲ್ ಆಡುವ ಬಗ್ಗೆ ಅನುಮಾನವಿತ್ತು.
ಇದಕ್ಕೆಲ್ಲ ಪಂದ್ಯದ ಬಳಿಕ ಮಾಹಿತಿ ನೀಡಿದ ಸ್ಟೋಕ್ಸ್, ನಾನು ಖಂಡಿತ ಐಪಿಎಲ್ ಆಡುತ್ತೇನೆ. ನಾನು ಇಂಜುರಿಯಿಂದ ಚೇತರಿಸಿಕೊಳ್ಳಲು ಶ್ರಮಿಸುತ್ತಿದ್ದೇನೆ. ನಾನು ಫಿಸಿಯೋ ಮತ್ತು ವೈದ್ಯಕೀಯ ತಂಡದೊಂದಿಗೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಚಿಂತಿಸಬೇಡಿ, ನಾನು ಐಪಿಎಲ್‌ನಲ್ಲಿ ಆಡಲಿದ್ದೇನೆ. ನಾನು ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂ.ಗೆ ಖರೀದಿಸಿತ್ತು. ಯಾವುದೇ ಹಂತದಲ್ಲೂ ಪಂದ್ಯವನ್ನು ತಿರುಗಿಸುವ ಸಾಮಥ್ಯ್ರವಿರುವ ಸ್ಟೋಕ್ಸ್, ಚೆನ್ನೈಗೆ ಐದನೇ ಪ್ರಶಸ್ತಿಯನ್ನು ಗೆಲ್ಲಿಸಿಕೊಡುತ್ತಾರೆ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಚೆನ್ನೈ ತಂಡದಿಂದ ಸ್ಟೋಕ್ಸ್ ಮೊದಲ ಬಾರಿಗೆ ಐಪಿಎಲ್ ಆಡಲಿದ್ದಾರೆ. ಆದರೆ ಅವರು ಧೋನಿ ಜೊತೆ ಆಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಈ ಇಬ್ಬರು ಆಟಗಾರರು 2016-17ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಒಟ್ಟಿಗೆ ಆಡಿದ್ದರು. ಆಗ ಚೆನ್ನೈ ತಂಡಕ್ಕೆ ಎರಡು ವರ್ಷ ನಿಷೇಧ ಹೇರಲಾಗಿತ್ತು. ಪುಣೆ ನಂತರ ಸ್ಟೋಕ್ಸ್ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದು, ಇದೀಗ ಚೆನ್ನೈಗೆ ಬಂದಿದ್ದಾರೆ.