IPL 2023 GT vs KKR: ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್...ಅದೇ ಪಂದ್ಯದಲ್ಲಿ 5 ಬ್ಯಾಕ್ ಟು ಬ್ಯಾಕ್ ಸಿಕ್ಸ್. ಹೌದು, ಇಂತಹದೊಂದು ರೋಚಕ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿದೆ. ಈ ಪಂದ್ಯದ ಹೀರೋ ಕೆಕೆಆರ್ ತಂಡದ ಯುವ ಬ್ಯಾಟರ್ ರಿಂಕು ಸಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಕೇವಲ 40 ಎಸೆತಗಳನ್ನು ಎದುರಿಸಿದ ವೆಂಕಟೇಶ್ ಅಯ್ಯರ್ 5 ಸಿಕ್ಸ್ ಹಾಗು 8 ಫೋರ್ನೊಂದಿಗೆ 83 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು 4 ಓವರ್ಗಳಲ್ಲಿ 50 ರನ್ಗಳ ಗುರಿಯಿತ್ತು. ಆದರೆ 17ನೇ ಓವರ್ ಎಸೆದ ರಶೀದ್ ಖಾನ್ ಮೊದಲ ಎಸೆತದಲ್ಲೇ ಆ್ಯಂಡ್ರೆ ರಸೆಲ್ (1) ಅವರ ವಿಕೆಟ್ ಪಡೆದರು. ಇನ್ನು ಮರು ಎಸೆತದಲ್ಲೇ ಸುನಿಲ್ ನರೈಲ್ (0) ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಬಂದ ಶಾರ್ದೂಲ್ ಠಾಕೂರ್ (0) ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ರಶೀದ್ ಖಾನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರೊಂದಿಗೆ ಇಡೀ ಪಂದ್ಯದ ಚಿತ್ರಣ ಬದಲಾಯ್ತು. ಗೆಲ್ಲಬೇಕಿದ್ದ ಪಂದ್ಯದಲ್ಲಿ ಕೆಕೆಆರ್ ತಂಡವು ಸೋಲಿನತ್ತ ಮುಖಮಾಡಿತು.
ಕೊನೆಯ ಓವರ್ನಲ್ಲಿ ಕೆಕೆಆರ್ ತಂಡದ ಮುಂದೆ 29 ರನ್ಗಳ ಕಠಿಣ ಗುರಿಯಿತ್ತು. ಹಂಗಾಮಿ ನಾಯಕ ರಶೀದ್ ಖಾನ್ ಯಶ್ ದಯಾಳ್ ಕೈಗೆ ಚೆಂಡು ನೀಡಿದರು. ಅತ್ತ ಸ್ಟ್ರೈಕ್ನಲ್ಲಿದ್ದ ಉಮೇಶ್ ಯಾದವ್ ಸಿಂಗಲ್ ತೆಗೆದರು. ಆ ಬಳಿಕ ನಡೆದಿದೆಲ್ಲವೂ ಇತಿಹಾಸ.
ಸ್ಟ್ರೈಕ್ಗೆ ಬಂದ ರಿಂಕು ಸಿಂಗ್ ಬ್ಯಾಕ್ ಟು ಬ್ಯಾಕ್ 4 ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ ಎಸೆತದಲ್ಲಿ 4 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ರಣರೋಚಕ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 48 ರನ್ ಬಾರಿಸಿದ ರಿಂಕು ಸಿಂಗ್ ಗೆಲುವಿನ ರುವಾರಿ ಎನಿಸಿಕೊಂಡರು. ಅಲ್ಲದೆ ಐಪಿಎಲ್ನ ಕೊನೆಯ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟ ವಿಶೇಷ ದಾಖಲೆಯನ್ನು ಕೂಡ ಬರೆದರು.