
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸ್ ತನ್ನ ತಂಡದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದೆ. ಅದರಂತೆ ತಂಡಕ್ಕೆ ವಿದೇಶಿ ಆಟಗಾರನನ್ನು ಹೊಸ ಉಪನಾಯಕನಾಗಿ ನೇಮಿಸಿಕೊಂಡಿದೆ.

ಅದರಂತೆ ಕಳೆದ ಆವೃತ್ತಿಯಲ್ಲಿ ತಂಡದ ಉಪನಾಯಕರಾಗಿದ್ದ ಕೃನಾಲ್ ಪಾಂಡ್ಯ ಇದೀಗ ಈ ಸ್ಥಾನವನ್ನು ವೆಸ್ಟ್ ಇಂಡೀಸ್ನ ಮಾಜಿ ನಾಯಕ ನಿಕೋಲಸ್ ಪೂರನ್ಗೆ ಬಿಟ್ಟುಕೊಡಲಿದ್ದಾರೆ. ಅಂದರೆ ಇನ್ನು ಮುಂದೆ ಲಕ್ನೋ ತಂಡದಉಪನಾಯಕರಾಗಿ ಪೂರನ್ ಕಾಣಿಸಿಕೊಳ್ಳಲಿದ್ದಾರೆ.

ಫ್ರಾಂಚೈಸ್ ಗುರುವಾರ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ತಂಡದ ನಾಯಕ ಕೆಎಲ್ ರಾಹುಲ್ ನಿಕೋಲಸ್ ಪುರನ್ ಅವರಿಗೆ ಜೆರ್ಸಿ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಈ ಜೆರ್ಸಿಯ ಹಿಂಭಾಗದಲ್ಲಿ ಪೂರನ್ ಹೆಸರನ್ನು ಬರೆಯಲಾಗಿದ್ದು, ಬ್ರಾಕೆಟ್‌ನಲ್ಲಿ ವಿಸಿ (ಉಪನಾಯಕ) ಎಂದು ಬರೆಯಲಾಗಿದೆ.

ಫ್ರಾಂಚೈಸಿಯ ಈ ನಿರ್ಧಾರದ ನಂತರ, ಕೃನಾಲ್ ಪಾಂಡ್ಯ ಅವರನ್ನು ಏಕೆ ಈ ಹುದ್ದೆಯಿಂದ ತೆಗೆದುಹಾಕಲಾಯಿತು ಎಂದು ಅನೇಕ ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ. ಫ್ರಾಂಚೈಸಿಯ ಈ ನಿರ್ಧಾರಕ್ಕೆ ಕಾರಣ ಕಳೆದ ಸೀಸನ್ನಲ್ಲಿ ನಾಯಕನಾಗಿ ಕೃನಾಲ್ ಪಾಂಡ್ಯ ಉತ್ತಮ ಪ್ರದರ್ಶನ ನೀಡದಿರುವುದು.

ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಕೃನಾಲ್ ಅವರ ನಾಯಕತ್ವದಲ್ಲಿ ತಂಡವು ಪ್ಲೇಆಫ್ ತಲುಪಿತು. ಆದರೆ ಪ್ಲೇಆಫ್ ಆಫ್ ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ನಾಯಕತ್ವದ ಜೊತೆಗೆ ಕೃನಾಲ್ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿಯೂ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿರುವ ಸಾಧ್ಯತೆಗಳಿವೆ.

ಲಕ್ನೋ ಸೂಪರ್ ಜೈಂಟ್ಸ್ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಆಯುಷ್ ಬದೋನಿ, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ದೇವದತ್ ಪಡಿಕ್ಕಲ್, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಯಶ್ ಠಾಕೂರ್ , ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ, ಮಯಾಂಕ್ ಯಾದವ್, ಶಮರ್ ಜೋಸೆಫ್, ಮೊಹ್ಸಿನ್ ಖಾನ್, ಕೃಷ್ಣಪ್ಪ ಗೌತಮ್, ಅರ್ಶಿನ್ ಕುಲಕರ್ಣಿ, ಶಿವಂ ಮಾವಿ, ಎಂ ಸಿದ್ಧಾರ್ಥ್, ಡೇವಿಡ್ ವಿಲ್ಲಿ, ಆಷ್ಟನ್ ಟರ್ನರ್, ಮೊಹಮ್ಮದ್ ಅರ್ಷದ್ ಖಾನ್.