
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು ಯೋಜನೆಗಳನ್ನು ರೂಪಿಸಿತ್ತಿದೆ. ಈ ಯೋಜನೆಗಳ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ ಎಂದು ವರದಿಯಾಗಿದೆ. ಅದು ಸಹ ರೋಹಿತ್ ಶರ್ಮಾ ಅವರ ಖರೀದಿಗಾಗಿ ಎಂಬುದು ವಿಶೇಷ.

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿ ಹಿಟ್ಮ್ಯಾನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದು. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಮುಂಬೈ ಬಳಗದಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದೆ.

ಇತ್ತ ರೋಹಿತ್ ಶರ್ಮಾ ಅವರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬರುವುದಂತು ಖಚಿತ. ಏಕೆಂದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿ ಯಶಸ್ವಿ ನಾಯಕನ ಮೇಲೆ ಬಹುತೇಕ ಫ್ರಾಂಚೈಸಿಗಳು ಕಣ್ಣಿಟ್ಟಿದೆ.

ಬಹುತೇಕ ಫ್ರಾಂಚೈಸಿಗಳ ಹಿಟ್ ಲಿಸ್ಟ್ನಲ್ಲಿ ರೋಹಿತ್ ಶರ್ಮಾ ಹೆಸರು ಇರುವುದರಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಅದು ಸಹ ಕೋಟಿ ರೂ.ನೊಂದಿಗೆ ಎಂಬುದೇ ವಿಶೇಷ. ಅಂದರೆ ರೋಹಿತ್ ಶರ್ಮಾ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರಿಗಾಗಿ ಡೆಲ್ಲಿ ಹಾಗೂ ಲಕ್ನೋ ಫ್ರಾಂಚೈಸಿಗಳು ಬೃಹತ್ ಮೊತ್ತದವರೆಗೆ ಬಿಡ್ಡಿಂಗ್ ನಡೆಸಲಿದೆ.

ವರದಿಗಳ ಪ್ರಕಾರ, ರೋಹಿತ್ ಶರ್ಮಾ ಅವರಿಗಾಗಿಯೇ ಈ ಎರಡು ಫ್ರಾಂಚೈಸಿಗಳು 50 ಕೋಟಿ ರೂ. ಕಾಯ್ದಿರಿಸಲಿದೆ. ಅಂದರೆ ಒಟ್ಟು ಹರಾಜು ಮೊತ್ತದಿಂದ 50 ಕೋಟಿ ರೂ. ಅನ್ನು ಹಿಟ್ಮ್ಯಾನ್ ಖರೀದಿಗಾಗಿ ತೆಗೆದಿಡಲು ನಿರ್ಧರಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಬೃಹತ್ ಮೊತ್ತ ತೆತ್ತಾದರೂ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಹೊರಬಂದು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಭರ್ಜರಿ ಪೈಪೋಟಿ ಕಂಡು ಬರುವುದಂತು ಖಚಿತ. ಅದರಂತೆ ಹಿಟ್ಮ್ಯಾನ್ ಅವರ ಖರೀದಿಯೂ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದರೂ ಅಚ್ಚರಿಪಡಬೇಕಿಲ್ಲ. ಈ ಮೂಲಕ ರೋಹಿತ್ ಶರ್ಮಾ ಐಪಿಎಲ್ 2025 ರಲ್ಲಿ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.