ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ 18ಕ್ಕಾಗಿ ಎಲ್ಲಾ ತಂಡಗಳು ಸಿದ್ಧಗೊಂಡಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬಲಿಷ್ಠ ಪಡೆಯನ್ನು ರೂಪಿಸಿದೆ. ಈ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಆದರೆ ಮೊದಲ ಮ್ಯಾಚ್ನಲ್ಲಿ ಪಾಂಡ್ಯಗೆ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ.
ಏಕೆಂದರೆ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
ಈ ಒಂದು ಪಂದ್ಯದ ನಿಷೇಧದ ಶಿಕ್ಷೆ ಈ ಬಾರಿಯ ಐಪಿಎಲ್ನಲ್ಲಿ ಮುಂದುವರೆಯಲಿದೆ. ಅದರಂತೆ ಐಪಿಎಲ್ 2025 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯವಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೊದಲ ಮ್ಯಾಚ್ನಲ್ಲಿ ಮುಂಬೈ ಪಡೆಯನ್ನು ಜಸ್ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಇನ್ನು ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ. ಹಾಗೆಯೇ ಈ ತಪ್ಪನ್ನು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ, ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ ತಲಾ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ.
ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಮೂರು ಬಾರಿ ತಪ್ಪು ಮಾಡಿದ ನಾಯಕ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರು ತಲಾ 12 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ಅದರಂತೆ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (2 ಬಾರಿ) ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸ್ಲೋ ಓವರ್ ರೇಟ್ ತಪ್ಪು ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2025ರ ಮೊದಲ ಪಂದ್ಯದಿಂದ ಬ್ಯಾನ್ ಆಗಿದ್ದಾರೆ.