ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಕ್ಕಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇದೀಗ ಪಂಜಾಬ್ ಕಿಂಗ್ಸ್ ಕೂಡ ಐಪಿಎಲ್ 2025ರ ಕಿಟ್ ಅನ್ನು ಬಿಡುಗಡೆ ಮಾಡಿದೆ.
ಆದರೆ ಪಂಜಾಬ್ ಕಿಂಗ್ಸ್ ಐಪಿಎಲ್ ಸೀಸನ್-18 ಕ್ಕಾಗಿ ಅನಾವರಣಗೊಳಿಸಿದ ಜೆರ್ಸಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್ 2024 ರಲ್ಲಿ ಧರಿಸಿದ್ದ ಜೆರ್ಸಿ ವಿನ್ಯಾಸವನ್ನೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಮುಂದುವರೆಸಲಾಗಿದೆ.
ಇದಾಗ್ಯೂ ನೂತನ ಜೆರ್ಸಿಯಲ್ಲಿ ಕಂಡು ಬಂದಿರುವ ವ್ಯತ್ಯಾಸವೆಂದರೆ ಒಂದು ಬಟನ್ ಮಾತ್ರ. ಅಂದರೆ ಕಳೆದ ಬಾರಿ ಪಂಜಾಬ್ ಕಿಂಗ್ಸ್ ಆಟಗಾರರು ಧರಿಸಿದ್ದ ಜೆರ್ಸಿಯಲ್ಲಿ 2 ಬಟನ್ಗಳಿದ್ದರೆ, ಈ ಬಾರಿ ಅದನ್ನು ಮೂರಕ್ಕೇರಿಸಿದೆ. ಈ ಮೂರು ಬಟನ್ಗಳ ಜೆರ್ಸಿಯನ್ನೇ ನೂತನ ವಿನ್ಯಾಸದ ಜೆರ್ಸಿ ಎಂದು ಬಿಡುಗಡೆ ಮಾಡಿ ಇದೀಗ ನಗೆಪಾಲಿಗೀಡಾಗಿದೆ.
ಈ ಮೂರು ಬಟನ್ ಹೊಂದಿರುವ ನೂತನ ಜೆರ್ಸಿ ಧರಿಸಿ ಪಂಜಾಬ್ ಕಿಂಗ್ಸ್ ಮಾರ್ಚ್ 25 ರಂದು ಕಣಕ್ಕಿಳಿಯಲಿದೆ. ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿರುವ ಪಂಜಾಬ್ ಕಿಂಗ್ಸ್ ತಂಡದ ಮೊದಲ ಎದುರಾಳಿ ಗುಜರಾತ್ ಟೈಟಾನ್ಸ್. ಈ ಪಂದ್ಯದ ಮೂಲಕ ಪಂಜಾಬ್ ಪಡೆ ಐಪಿಎಲ್ ಅಭಿಯಾನ ಆರಂಭಿಸಲಿದೆ.
ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಲ್, ಅರ್ಷ್‌ದೀಪ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್, ಹರ್‌ಪ್ರೀತ್ ಬ್ರಾರ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಯಾನ್ಸೆನ್, ಜೋಶ್ ಇಂಗ್ಲಿಸ್, ಲಾಕಿ ಫರ್ಗುಸನ್, ಅಝ್ಮತುಲ್ಲಾ ಒಮರ್ಝಾಹಿ,ಆರೋನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ, ಕ್ಸೇವಿಯರ್ ಬ್ರಾಟ್ಲೆಟ್, ಪೈಲಾ ಅವಿನಾಶ್, ಪ್ರವೀಣ್ ದುಬೆ, ನೆಹಾಲ್ ವಧೇರಾ, ಹರ್ನೂರ್ ಪನ್ನು, ಕುಲ್ದೀಪ್ ಸೇನ್.