
ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯಗೊಂಡಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಎಡವಿತು. ಭಾರತದ ಯುವ ಪಡೆ ಟಿ20 ಸರಣಿ ಸೋಲಿನಿಂದ ಕೆಲ ವಿಷಯಗಳನ್ನು ಕಲಿತು ಕೆರಿಬಿಯನ್ ಪ್ರವಾಸವನ್ನು ಪೂರ್ಣಗೊಳಿಸಿದೆ. ಇದೀಗ ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ನಾಡಿಗೆ ತೆರಳಲು ತಯಾರಾಗಿದೆ.

ಈಗಾಗಲೇ ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಕೂಡ ಪ್ರಕಟವಾಗಿದೆ. ನಾಳೆ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಟೀಮ್ ಇಂಡಿಯಾ ಐರ್ಲೆಂಡ್ಗೆ ತೆರಳಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಭಾರತ-ಐರ್ಲೆಂಡ್ ಟಿ20 ಸರಣಿ ಆಗಸ್ಟ್ 18 ರಿಂದ ಆರಂಭವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಗಸ್ಟ್ 15 ರಂದು ಡಬ್ಲಿನ್ಗೆ ಪ್ರಯಾಣ ಬೆಳೆಸಲಿದೆ. ಇದು ಕೆಲವೇ ದಿನಗಳ ಪಂದ್ಯಾವಳಿ ಆಗಿರುವ ಕಾರಣ ಭಾರತದ ಹಿರಿಯ ಆಟಗಾರರ ಜೊತೆಗೆ ಕೋಚಿಂಗ್ ಸಿಬ್ಬಂದಿಗೂ ಐರ್ಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.

ಐರ್ಲೆಂಡ್ ವಿರುದ್ಧ ಭಾರತ ಒಟ್ಟು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆಗಸ್ಟ್ 18 ರಂದು ಮೊದಲ ಟಿ20 ಪಂದ್ಯ, 2ನೇ ಪಂದ್ಯವು ಆಗಸ್ಟ್ 20 ರಂದು ಜರುಗಲಿದೆ. ಅಂತೆಯೆ 3ನೇ ಪಂದ್ಯ ಆಗಸ್ಟ್ 22 ರಂದು ಆಯೋಜಿಸಲಾಗಿದೆ. ಈ ಎಲ್ಲಾ ಪಂದ್ಯಗಳಿಗೆ ಡಬ್ಲಿನ್ನ ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತೀಯ ಕಾಲಮಾನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ನಡುವಣ ಟಿ20 ಸರಣಿ ಸಂಜೆ 7:30ಕ್ಕೆ ಶುರುವಾಗಲಿದೆ. ಇದರ ನೇರ ಪ್ರಸಾರದ ಹಕ್ಕು ವಯಾಕಾಮ್ 18 ಪಾಲಾಗಿದ್ದು ಸ್ಪೋರ್ಟ್ 18ನಲ್ಲಿ ಲೈವ್ ವೀಕ್ಷಿಸಬಹುದು. ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಇರಲಿದೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಹೆಚ್ಚು ಯುವ ಆಟಗಾರರನ್ನೇ ಆಯ್ಕೆ ಮಾಡಿದ್ದು, ರುತುರಾಜ್ ಗಾಯಕ್ವಾಡ್ಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ಪ್ರಸಿದ್ಧ್ ಕೃಷ್ಣ, ಶಿವಂ ದುಬೆ ತಂಡಕ್ಕೆ ಮರಳಿದರೆ ರಿಂಕು ಸಿಂಗ್, ಜಿತೇಶ್ ಶರ್ಮಾ ಅವಕಾಶ ಪಡೆದುಕೊಂಡಿದ್ದಾರೆ. ಇದು ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತ ಟಿ20 ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಶಹಬಾಝ್ ಅಹ್ಮದ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

ಐರ್ಲೆಂಡ್ ಟಿ20 ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೇರ್, ಲೋರ್ಕನ್ ಟಕರ್, ಹ್ಯಾರಿ ಟ್ಯಾಕ್ಟರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್ ವೀರ್‌ಕಾಮ್, ಬೆನ್ ವೈಟ್, ಕ್ರೇಗ್ ಯುಂಗ್.