
ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೇಮಿ ಸ್ಮಿತ್ (Jamie Smith) ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಜೇಮಿ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿದರು. ಪರಿಣಾಮ ಇಂಗ್ಲೆಂಡ್ನ ಯುವ ದಾಂಡಿಗನ ಬ್ಯಾಟ್ನಿಂದ ಕೇವಲ 80 ಎಸೆತಗಳಲ್ಲಿ ಶತಕ ಮೂಡಿಬಂತು. ಈ ಮೂಲಕ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ 4ನೇ ಬ್ಯಾಟರ್ ಎನಿಸಿಕೊಂಡರು.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಕೊನೆಯವರೆಗೂ ವಿಕೆಟ್ ಕಾಯ್ದುಕೊಂಡ ಜೇಮಿ ಸ್ಮಿತ್ 207 ಎಸೆತಗಳನ್ನು ಎದುರಿಸಿ 4 ಸಿಕ್ಸ್ ಹಾಗೂ 21 ಫೋರ್ಗಳೊಂದಿಗೆ ಅಜೇಯ 184 ರನ್ ಬಾರಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ ಸ್ಕೋರ್ಗಳಿಸಿದ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆ ಜೇಮಿ ಸ್ಮಿತ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಅಲೆಕ್ ಸ್ಟಿವರ್ಟ್ ಹೆಸರಿನಲ್ಲಿತ್ತು. 1997 ರಲ್ಲಿ ಆಕ್ಲೆಂಡ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಲೆಕ್ ಸ್ಟಿವರ್ಟ್ 173 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 28 ವರ್ಷಗಳ ಬಳಿಕ ಆಂಗ್ಲರ ಪರ ಹೊಸ ಇತಿಹಾಸ ರಚಿಸುವಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ಯಶಸ್ವಿಯಾಗಿದ್ದಾರೆ.

ಇನ್ನು ಜೇಮಿ ಸ್ಮಿತ್ ಬಾರಿಸಿದ ಅಜೇಯ 184 ರನ್ಗಳ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 407 ರನ್ ಕಲೆಹಾಕಿ ಆಲೌಟ್ ಆಗಿದೆ. ಇತ್ತ 180 ರನ್ಗಳ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 64 ರನ್ಗಳಿಸಿದೆ.
Published On - 3:11 pm, Sat, 5 July 25