
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಮೂರನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ (Joe Root) ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಮೂರು ಬಾರಿ ಕೂಡ ರನ್ ಸರದಾರನಾಗಿ ಹೊರಹೊಮ್ಮುವ ಮೂಲಕ ಎಂಬುದು ವಿಶೇಷ. ಅಂದರೆ WTC ಇತಿಹಾಸದಲ್ಲಿ ಮೂರು ಬಾರಿ 1500+ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಜೋ ರೂಟ್.

ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಎರಡು ಆವೃತ್ತಿಗಳಲ್ಲಿ ಅತೀ ಹೆಚ್ಚು ರನ್ ಕಲೆಹಾಕಿ ಅಗ್ರಸ್ಥಾನ ಅಲಂಕರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. 2019-21 ರ WTC ಸರಣಿಯಲ್ಲಿ ಜೋ ರೂಟ್ 3 ಭರ್ಜರಿ ಸೆಂಚುರಿಗಳೊಂದಿಗೆ 1660 ರನ್ ಕಲೆಹಾಕಿ ಮಿಂಚಿದ್ದರು.

2021-2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಗಳಲ್ಲಿ ಜೋ ರೂಟ್ ಬ್ಯಾಟ್ನಿಂದ ಮೂಡಿಬಂದ ಒಟ್ಟು ಸೆಂಚುರಿಗಳು 8. ಅಲ್ಲದೆ ಈ ಅವಧಿಯಲ್ಲಿ 1915 ರನ್ ಕಲೆಹಾಕಿ ಹೊಸ ಇತಿಹಾಸ ನಿರ್ಮಿಸಿದ್ದರು. ಇನ್ನು 2023-25ರ ಅವಧಿಯಲ್ಲಿ 7 ಶತಕಗಳೊಂದಿಗೆ ಒಟ್ಟು 1968 ರನ್ ಕಲೆಹಾಕಿದ್ದಾರೆ.

ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಆವೃತ್ತಿವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಎರಡು ಆವೃತ್ತಿಗಳಲ್ಲಿ 1900+ ರನ್ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.

2023-25 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ರನ್ ಸರದಾರನಾಗಿ ಹೊರಹೊಮ್ಮಿರುವ ಜೋ ರೂಟ್, ಇದೀಗ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ರೂಟ್ ಬ್ಯಾಟ್ನಿಂದ ಎಷ್ಟು ರನ್ಗಳು ಹರಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.