12 ದಿನಗಳಲ್ಲಿ 4 ಟೆಸ್ಟ್ ಪಂದ್ಯಗಳು
India Vs England 2025: ಜೂನ್ ತಿಂಗಳಾಂತ್ಯದೊಳಗೆ 8 ತಂಡಗಳು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಶುಕ್ರವಾರದಿಂದ ಶುರುವಾಗಲಿದ್ದು, ಈ ಪಂದ್ಯದ ಬೆನ್ನಲ್ಲೇ ಮುಂದಿನ ವಾರದಿಂದ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ತಂಡಗಳು ಕೂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2027ರ ಸರಣಿಯ ಮೊದಲ ಪಂದ್ಯಗಳನ್ನಾಡಲಿದೆ.
Updated on:Jun 17, 2025 | 8:10 AM

ಚುಟುಕು ಕ್ರಿಕೆಟ್ ಪಂದ್ಯಗಳ ಅಬ್ಬರದ ಬಳಿಕ ಟೆಸ್ಟ್ ಸರಣಿಗಳು ಮತ್ತೆ ಶುರುವಾಗುತ್ತಿದೆ. ಅದರಲ್ಲೂ ಇದೇ ತಿಂಗಳು 8 ತಂಡಗಳು 4 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ 4 ಸರಣಿಗಳಲ್ಲಿ ಟೀಮ್ ಇಂಡಿಯಾ ಕೂಡ ಕಣಕ್ಕಿಳಿಯುತ್ತಿರುವುದು ವಿಶೇಷ. ಅಂದರೆ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2027ರ ಸರಣಿಯನ್ನು ಆರಂಭಿಸಲಿದೆ. ಹಾಗಿದ್ರೆ ಈ ತಿಂಗಳು ಟೆಸ್ಟ್ ಸರಣಿಗಳನ್ನು ಆಡಲಿರುವ 8 ತಂಡಗಳಾವುವು ಎಂದು ನೋಡೋಣ...

ಶ್ರೀಲಂಕಾ vs ಬಾಂಗ್ಲಾದೇಶ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2027ರ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವುದು ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು. ಶ್ರೀಲಂಕಾದ ಗಾಲೆಯಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯವು ಇಂದಿನಿಂದ (ಜೂನ್ 17) ಶುರುವಾಗಲಿದೆ. ಈ ಸರಣಿಯಲ್ಲಿ ಬಾಂಗ್ಲಾದೇಶ್-ಶ್ರೀಲಂಕಾ ಒಟ್ಟು 2 ಟೆಸ್ಟ್ ಪಂದ್ಯಗಳನ್ನಾಡಲಿದೆ.

ಭಾರತ vs ಇಂಗ್ಲೆಂಡ್: ಇಂಡೊ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಶುಕ್ರವಾರ ನಡೆಯಲಿರುವ ಮೊದಲ ಪಂದ್ಯಕ್ಕೆ ಲೀಡ್ಸ್ನ ಹೆಡಿಂಗ್ಲೆ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಈ ಪಂದ್ಯದ ಮೂಲಕ ಶುಭ್ಮನ್ ಗಿಲ್ ಭಾರತ ಟೆಸ್ಟ್ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ.

ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ: ವಿಂಡೀಸ್-ಆಸೀಸ್ ನಡುವಿನ ಟೆಸ್ಟ್ ಸರಣಿಯು ಜೂನ್ 25 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ನಡೆಯಲಿದ್ದು, ಈ ಸಿರೀಸ್ನಲ್ಲಿ ಉಭಯ ತಂಡಗಳು ಒಟ್ಟು 3 ಟೆಸ್ಟ್ ಪಂದ್ಯಗಳನ್ನಾಡಲಿದೆ.

ಝಿಂಬಾಬ್ವೆ vs ಸೌತ್ ಆಫ್ರಿಕಾ: ವಿಶ್ವ ಟೆಸ್ಟ್ ಚಾಂಪಿಯನ್ ಸೌತ್ ಆಫ್ರಿಕಾ ತಂಡವು ಜೂನ್ 28 ರಂದು ಝಿಂಬಾಬ್ವೆ ವಿರುದ್ಧ ಕಣಕ್ಕಿಳಿಯಲಿದೆ. ಝಿಂಬಾಬ್ವೆಯಲ್ಲಿ ನಡೆಯಲಿರುವ ಈ ಟೆಸ್ಟ್ ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನಾಡಲಾಗುತ್ತದೆ. ಅದರಂತೆ ಜೂನ್ ತಿಂಗಳಾಂತ್ಯದೊಳಗೆ ಒಟ್ಟು 8 ತಂಡಗಳು ಟೆಸ್ಟ್ ಸರಣಿಯನ್ನು ಆರಂಭಿಸಲಿದೆ.
Published On - 8:09 am, Tue, 17 June 25









