
ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ ಅಬ್ಬರ ಮುಂದುವರೆದಿದೆ. ಈ ಅಬ್ಬರದೊಂದಿಗೆ ಇಂಗ್ಲೆಂಡ್ ಬ್ಯಾಟರ್ ತನ್ನ 36ನೇ ಟೆಸ್ಟ್ ಶತಕ ಪೂರೈಸಿದ್ದಾರೆ. ಈ ಶತಕದೊಂದಿಗೆ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಜೋ ರೂಟ್ ಸರಿಗಟ್ಟಿದ್ದಾರೆ.

ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಜೋ ರೂಟ್ 130 ಎಸೆತಗಳಲ್ಲಿ 11 ಫೋರ್ಗಳೊಂದಿಗೆ 106 ರನ್ ಬಾರಿಸಿದ್ದಾರೆ. ಈ ಭರ್ಜರಿ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ರೂಟ್ 5ನೇ ಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ ಐದನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಮಾತ್ರ ಕಾಣಿಸಿಕೊಂಡಿದ್ದರು. 164 ಟೆಸ್ಟ್ ಪಂದ್ಯಗಳಲ್ಲಿ 36 ಶತಕ ಸಿಡಿಸಿ ದ್ರಾವಿಡ್ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ.

ಈವರೆಗೆ 151 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 36 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಸೆಂಚುರಿ ಸರದಾರರ ಪಟ್ಟಿಯಲ್ಲಿ ಜಂಟಿಯಾಗಿ ರಾಹುಲ್ ದ್ರಾವಿಡ್ ಜೊತೆ 5ನೇ ಸ್ಥಾನ ಅಲಂಕರಿಸಿದ್ದಾರೆ.

ಸದ್ಯ ಜೋ ರೂಟ್ ಮುಂದಿರುವುದು ಕುಮಾರ ಸಂಗಾಕ್ಕರ, ರಿಕಿ ಪಾಂಟಿಂಗ್, ಜಾಕ್ಸ್ ಕಾಲಿಸ್ ಮತ್ತು ಸಚಿನ್ ತೆಂಡೂಲ್ಕರ್ ಮಾತ್ರ. ಅದರಲ್ಲೂ 33 ವರ್ಷದ ಜೋ ರೂಟ್ ಈ ಭರ್ಜರಿ ಫಾರ್ಮ್ ಮುಂದುವರೆಸಿದರೆ ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಮುರಿಯಬಹುದು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಮಾಸ್ಟರ್ ಬ್ಲಾಸ್ಟರ್ 200 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 51 ಶತಕ ಬಾರಿಸಿದ್ದಾರೆ. ಇದೀಗ 36 ಸೆಂಚುರಿ ಸಿಡಿಸಿರುವ ಜೋ ರೂಟ್ ಮುಂಬರುವ ದಿನಗಳಲ್ಲಿ 16 ಶತಕ ಬಾರಿಸಿದರೆ ಟೆಸ್ಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.