
ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದೆ. ಈ ಪಂದ್ಯದೊಂದಿಗೆ, ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಕೂಡ ಸುಮಾರು 15 ತಿಂಗಳ ನಂತರ ಏಕದಿನ ಪಂದ್ಯವನ್ನು ಆಡಿದರು. ಆದರೆ ಬಹಳ ದಿನಗಳ ಬಳಿಕ ಈ ಮಾದರಿಯಲ್ಲಿ ಬ್ಯಾಟ್ ಬೀಸಿದ ರೂಟ್ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಅನುಭವಿ ಜೋ ರೂಟ್ರನ್ನು ಪೆವಿಲಿಯನ್ಗಟ್ಟುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಈ ಪಂದ್ಯದಲ್ಲಿ ರೂಟ್ 31 ಎಸೆತಗಳಲ್ಲಿ ಕೇವಲ 19 ರನ್ ಕಲೆಹಾಕಿ ಜಡೇಜಾಗೆ ಬಲಿಯಾದರು. ಇತ್ತ ರೂಟ್ ಅವರ ವಿಕೆಟ್ ಪಡೆಯುವ ಮೂಲಕ ಜಡೇಜಾ ದಾಖಲೆಯನ್ನು ಸೃಷ್ಟಿಸಿದರು. ವಾಸ್ತವವಾಗಿ, ಜೋ ರೂಟ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಡೇಜಾ ವಿರುದ್ಧ ಅತಿ ಹೆಚ್ಚು ಬಾರಿ ಔಟಾದ ಬ್ಯಾಟ್ಸ್‌ಮನ್ ಆಗಿದ್ದಾರೆ. ಜಡೇಜಾ ಅವರನ್ನು 12ನೇ ಬಾರಿಗೆ ಬೇಟೆಯಾಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತನ್ನ ಸಿದ್ಧತೆಗಳನ್ನು ಬಲಪಡಿಸಲು ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಇಂದಿನ ಪಂದ್ಯದಲ್ಲಿ ಇಂಗ್ಲಿಷ್ ತಂಡದ ಆರಂಭಿಕರು ವೇಗದ ಆರಂಭ ನೀಡಿದ್ದರು. ಆದರೆ ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಔಟಾದ ನಂತರ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳಲು ಪ್ರಾರಂಭಿಸಿತು. ಇತ್ತ ಇಂಗ್ಲೆಂಡ್ ಬ್ಯಾಟಿಂಗ್ ಲೈನ್ ಅಪ್ನ ಬೆನ್ನೆಲುಬು ಎಂದು ಪರಿಗಣಿಸಲ್ಪಟ್ಟ ಜೋ ರೂಟ್ ಕೂಡ ತಂಡದ ಕೈಹಿಡಿಯಲಿಲ್ಲ.

19 ರನ್ ಬಾರಿಸಿ ಔಟಾದ ರೂಟ್ ಈ ಮೂಲಕ ಏಕದಿನ ಮಾದರಿಯಲ್ಲಿ ನಾಲ್ಕನೇ ಬಾರಿಗೆ, ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ನೇ ಬಾರಿಗೆ ಜಡೇಜಾಗೆ ಬಲಿಯಾದರು. ಈ ಮೂಲಕ ಜಡೇಜಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೂಟ್ರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ನಿರ್ಮಿಸಿದರು.

ಪಂದ್ಯದುದ್ದಕ್ಕೂ ಅದ್ಭುತ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ನಾಗ್ಪುರ ಏಕದಿನ ಪಂದ್ಯದಲ್ಲಿ 9 ಓವರ್ ಬೌಲಿಂಗ್ ಮಾಡಿ 2.9 ರ ಎಕಾನಮಿಯಲ್ಲಿ ಕೇವಲ 26 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು. ಇದರಲ್ಲಿ ಮೇಡನ್ ಓವರ್ ಕೂಡ ಸೇರಿತ್ತು.

ಇದು ಮಾತ್ರವಲ್ಲದೆ ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಜಡೇಜಾ, ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಸಾಧನೆಯನ್ನು ಮಾಡಿದರು. ಇದರೊಂದಿಗೆ ಈ ದಾಖಲೆ ಮಾಡಿದ 5 ನೇ ಭಾರತೀಯ ಬೌಲರ್ ಎನಿಸಿಕೊಂಡರು.