Kane Williamson: ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದ ಕೇನ್ ವಿಲಿಯಮ್ಸನ್
TV9 Web | Updated By: ಝಾಹಿರ್ ಯೂಸುಫ್
Updated on:
Dec 29, 2022 | 5:58 PM
Kane Williamson: ವಿಶೇಷ ಎಂದರೆ ಈ ಭರ್ಜರಿ ದ್ವಿಶತಕದೊಂದಿಗೆ ನ್ಯೂಜಿಲೆಂಡ್ ಪರ ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ.
1 / 8
ಕರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ತಂಡ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ದ್ವಿಶತಕದೊಂದಿಗೆ ಹಲವು ರೆಕಾರ್ಡ್ಗಳನ್ನು ಬರೆದಿರುವುದು ವಿಶೇಷ.
2 / 8
ಮೊದಲ ಇನಿಂಗ್ಸ್ನಲ್ಲಿ ಪಾಕ್ ಕಲೆಹಾಕಿದ 438 ರನ್ಗಳಿಗೆ ಉತ್ತರವಾಗಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ (113) ಶತಕ ಬಾರಿಸಿದ್ದರು. ಇದಾದ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ 3ನೇ ದಿನದಾಟದ ವೇಳೆ ಶತಕ ಪೂರೈಸಿದ್ದರು.
3 / 8
ಇನ್ನು ನಾಲ್ಕನೇ ದಿನದಾಟದಲ್ಲಿ ಇಶ್ ಸೋಧಿ (65) ಜೊತೆಗೂಡಿ ಇನಿಂಗ್ಸ್ ಕಟ್ಟಿದ ಕೇನ್ ವಿಲಿಯಮ್ಸನ್ 395 ಎಸೆತಗಳಲ್ಲಿ 21 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಅಜೇಯ 200 ರನ್ ಬಾರಿಸಿದರು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 612 ರನ್ ಕಲೆಹಾಕಿ ನ್ಯೂಜಿಲೆಂಡ್ ಡಿಕ್ಲೇರ್ ಘೋಷಿಸಿತು.
4 / 8
ವಿಶೇಷ ಎಂದರೆ ಈ ಭರ್ಜರಿ ದ್ವಿಶತಕದೊಂದಿಗೆ ನ್ಯೂಜಿಲೆಂಡ್ ಪರ ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಪರ ಅತೀ ಹೆಚ್ಚು ದ್ವಿಶತಕ ಬಾರಿಸಿದ ದಾಖಲೆ ಬ್ರೆಂಡನ್ ಮೆಕಲಂ (4 ದ್ವಿಶತಕ) ಹೆಸರಿನಲ್ಲಿತ್ತು. ಇದೀಗ ಐದನೇ ದ್ವಿಶತಕ ಬಾರಿಸುವ ಮೂಲಕ ವಿಲಿಯಮ್ಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
5 / 8
ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ 5 ದ್ವಿಶತಕ ಬಾರಿಸಿರುವ ಗ್ರೇಮ್ ಸ್ಮಿತ್, ಜೋ ರೂಟ್ , ರಾಹುಲ್ ದ್ರಾವಿಡ್ ಮತ್ತು ಅಲೆಸ್ಟರ್ ಕುಕ್ ಅವರ ದಾಖಲೆಯನ್ನು ವಿಲಿಯಮ್ಸನ್ ಸರಿಗಟ್ಟಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ 7 ಡಬಲ್ ಸೆಂಚುರಿ ಬಾರಿಸಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನಲ್ಲಿದ್ದಾರೆ.
6 / 8
ಇನ್ನು ನ್ಯೂಜಿಲೆಂಡ್ ಪರ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ ದಾಖಲೆ ಕೂಡ ಕೇನ್ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ 19 ಶತಕ ಬಾರಿಸಿದ ರಾಸ್ ಟೇಲರ್ ಹೆಸರಿನಲ್ಲಿತ್ತು. ಇದೀಗ 20 ಶತಕದೊಂದಿಗೆ ಕೇನ್ ವಿಲಿಯ್ಸನ್ ಕಿವೀಸ್ ಟೆಸ್ಟ್ ಶತಕವೀರರ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
7 / 8
ಇದಲ್ಲದೆ ಪಾಕಿಸ್ತಾನ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಿದ ಮೊದಲ ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ. ಹಾಗೆಯೇ ಕಿವೀಸ್ ಪರ ಟೆಸ್ಟ್ನಲ್ಲಿ 7,568 ರನ್ ಬಾರಿಸಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
8 / 8
ಹಾಗೆಯೇ 10 ವಿವಿಧ ದೇಶಗಳಲ್ಲಿ (ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಪಾಕಿಸ್ತಾನ) ಟೆಸ್ಟ್ ಶತಕ ಬಾರಿಸಿದ ಮೊದಲ ಏಷ್ಯೇತರ ಆಟಗಾರ ಎಂಬ ದಾಖಲೆ ಕೂಡ ಕೇನ್ ವಿಲಿಯಮ್ಸನ್ ಪಾಲಾಗಿದೆ.
Published On - 5:58 pm, Thu, 29 December 22