
ದೇಶೀಯ ಅಂಗಳದ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಮುಂದಾಳತ್ವದ ವಿದರ್ಭ ತಂಡವನ್ನು ಮಣಿಸಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಸೋಲಿನ ಹೊರತಾಗಿಯೂ ಇಡೀ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರುಣ್ ನಾಯರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶೇಷ ಎಂದರೆ ಈ ಭರ್ಜರಿ ಪ್ರದರ್ಶನದೊಂದಿಗೆ ಕರುಣ್ ನಾಯರ್ ದೇಶೀಯ ಅಂಗಳದಲ್ಲಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ. ಅದು ಕೂಡ ನಾಯಕನಾಗಿ ಬರೋಬ್ಬರಿ 779 ರನ್ಗಳನ್ನು ಕಲೆಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ವಿಜಯ ಹಝಾರೆ ಟೂರ್ನಿಯ ಒಂದೇ ಸೀಸನ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ದಾಖಲೆ ಇದೀಗ ಕರುಣ್ ಪಾಲಾಗಿದೆ.

ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಮಹಾರಾಷ್ಟ್ರ ತಂಡದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಹೆಸರಿನಲ್ಲಿತ್ತು. 2022ರ ಸೀಸನ್ನಲ್ಲಿ ರುತುರಾಜ್ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿ ಒಟ್ಟು 660 ರನ್ ಕಲೆಹಾಕಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕರುಣ್ ಅಳಿಸಿ ಹಾಕಿದ್ದಾರೆ.

ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ವಿದರ್ಭ ತಂಡದ ನಾಯಕರಾಗಿ ಕಾಣಿಸಿಕೊಂಡ ಕರುಣ್ ನಾಯರ್ 8 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 5 ಶತಕ ಸಿಡಿಸುವ ಮೂಲಕ ಒಟ್ಟು 779 ರನ್ ಕಲೆಹಾಕಿದ್ದಾರೆ. ಈ ರನ್ ರಾಶಿಯೊಂದಿಗೆ ವಿಜಯ ಹಝಾರೆ ಟೂರ್ನಿಯ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂತಹದೊಂದು ಅಮೋಘ ಪ್ರದರ್ಶನದೊಂದಿಗೆ ಕರುಣ್ ನಾಯರ್ ವಿದರ್ಭ ತಂಡವನ್ನು ಫೈನಲ್ಗೇರಿಸಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಕರುಣ್ ಕೇವಲ 27 ರನ್ಗಳಿಸಿ ಔಟಾಗಿದ್ದು ವಿದರ್ಭ ಪಾಲಿಗೆ ಮುಳುವಾಯಿತು. ಇದರ ಸಂಪೂರ್ಣ ಲಾಭ ಪಡೆದ ಕರ್ನಾಟಕ ತಂಡವು 36 ರನ್ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.